ಗ್ರಾಮೀಣ ವೃತ್ತಿ, ಕರಕುಶಲಿಗರ ಸಬಲೀಕರಣಕ್ಕೆ ಟ್ಯಾಪ್ಮಿ ಸಹಾಯಹಸ್ತ

Update: 2020-01-27 15:14 GMT

ಉಡುಪಿ, ಜ.27: ಮಣಿಪಾಲದಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಸಂಸ್ಥೆ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಇದೀಗ ತನ್ನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿರುವ ಕರಕುಶಲಿಗರು ಹಾಗೂ ಅವರ ಪರಂಪರಾಗತ ಕಲೆಗಳ ಸಬಲೀಕರಣಕ್ಕೆ ಕೈಜೋಡಿಸುವ ಕಾರ್ಯಕ್ರಮವೊಂದನ್ನು ರೂಪಿಸಿ ಅದನ್ನು ಅನುಷ್ಠಾನ ಗೊಳಿಸುತ್ತಿದೆ.

ಇದರಿಂದ ಜಿಲ್ಲೆಯ ಗ್ರಾಮೀಣ ಕರಕುಶಲ ಕಲೆಗಳಾದ ಕಂಬಾರರು ಮಣ್ಣಿನಿಂದ ತಯಾರಿಸುವ ಮಡಕೆ ಹಾಗೂ ಇತರ ವಸ್ತುಗಳು, ಕೊರಗರು ಬಿದಿರು ಹೆಣೆದು ಮಾಡುವ ವಿವಿಧ ವಸ್ತುಗಳು, ಅಡಿಕೆ ಬೆಳೆಗಾರರು ಅಡಿಕೆ ಹಾಳೆಯಿಂದ ತಯಾರಿಸುವ ವಿವಿಧ ಉತ್ಪನ್ನಗಳಿಗೆ ಆಧುನಿಕತೆಯ ಸ್ಪರ್ಶ ಸಿಗಲು ಪ್ರಾರಂಭಿಸಿದೆ. ಈ ಮೂಲಕ ಅದು ಜಿಲ್ಲೆಯ ಪರಿಧಿಯನ್ನು ಮೀರಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಪ್ರಾರಂಭಿಸಿದೆ.

ಇವೆಲ್ಲವೂ ಸಾಧ್ಯವಾಗಿರುವುದು ಹಾಗೂ ಸಬಲೀಕರಣದ ಪ್ರಯತ್ನಕ್ಕೆ ಚಾಲನೆ ದೊರೆತಿರುವುದು ಟ್ಯಾಪ್ಮಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ. ದೇಶದ ವಿವಿಧ ರಾಜ್ಯಗಳಿಂದ ಮ್ಯಾನೇಜ್‌ಮೆಂಟ್ ಕೋರ್ಸ್ ಕಲಿಯಲು ಬರುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ದೇಶದ ಗ್ರಾಮೀಣ ಪ್ರದೇಶ ಮತ್ತು ಅಲ್ಲಿರುವ ಜನರು ತೀರಾ ಅಪರಿಚಿತ. ಅವರಿಗೆ ಅದೊಂದು ಬೇರೆಯೇ ಆದ ಲೋಕ. ಇಂಥ ವಿದ್ಯಾರ್ಥಿಗಳಿಗೆ ಈ ಲೋಕಕ್ಕೆ ಪ್ರವೇಶ ಸಿಕ್ಕಿರುವುದೇ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಮೊದಲ ವರ್ಷದ ಕಲಿಕೆಗೆ ಅಳವಡಿಸಿರುವ ಎರಡು ಕ್ರೆಡಿಟ್‌ನ ‘ಸೇವಾ’ (ಸಮಾಜ, ಪರಿಸರ, ವೌಲ್ಯ, ಮನೋಭಾವ) ಎಂಬ ಆರು ತಿಂಗಳ ಕಲಿಕಾ ವಿಷಯದಿಂದಾಗಿ.

ಟ್ಯಾಪ್ಮಿ 2018ರಿಂದ ಈ ವಿಷಯವನ್ನು (ಸೇವಾ) ಮೊದಲ ವರ್ಷದ ಎಂಬಿಎಗೆ ಅಳವಡಿಸಿದೆ. ಮಂಗಳೂರಿನ ಇಂಟ್ಯಾಕ್ಟ್ ಕ್ಲಬ್ ಇದರಲ್ಲಿ ಟ್ಯಾಪ್ಮಿಗೆ ಮಾರ್ಗದರ್ಶನ ನೀಡುತ್ತಿದೆ. ಆಗಸ್ಟ್ ತಿಂಗಳಿಂದ ಜನವರಿವರೆಗೆ ಈ ಕೋರ್ಸ್ ಇರುತ್ತದೆ. ಈ ಬಾರಿಯ ಸೇವಾ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಗ್ರಾಮೀಣ ಭಾಗದ ಕರಕುಶಲ ಕಲೆಗಳ ಸಬಲೀಕರಣಕ್ಕೆ ಹಾಕಿಕೊಂಡ ಯೋಜನೆಗಳು, ಅವರ ವರದಿಯ ಪ್ರಮುಖ ಅಂಶಗಳು, ಆಯಾ ಸ್ಥಳಗಳಿಗೆ ತೆರಳಿ ಅವರು ಸ್ಥಳೀಯರೊಂದಿಗೆ ನಡೆಸಿದ ಕ್ಷೇತ್ರ ಕಾರ್ಯಗಳ ವಿವರಗಳನ್ನು 80 ಬಡಗುಬೆಟ್ಟಿನಲ್ಲಿರುವ ಟ್ಯಾಪ್ಮಿ ಆವರಣದಲ್ಲಿ ಆಯೋಜಿಸಿದ ‘ಸೇವಾ ಜಾತ್ರೆ’ಯ ಮೂಲಕ ಪ್ರದರ್ಶಿಸಿದರು.

ಎಂಬಿಎ ಮೊದಲ ವರ್ಷದ 350 ವಿದ್ಯಾರ್ಥಿಗಳನ್ನು ತಲಾ 10 ವಿದ್ಯಾರ್ಥಿಗಳ 35 ಗುಂಪುಗಳಾಗಿ ವಿಭಾಗಿಸಿ, ಜಿಲ್ಲೆಯ ಬೇರೆ ಬೇರೆ ಗ್ರಾಮಗಳಲ್ಲಿರುವ ವಿವಿಧ ಪಾರಂಪರಿಕ ಕುಶಲಕಲೆ, ವೃತ್ತಿಬದುಕಿನ ಅಧ್ಯಯನದ ಕ್ಷೇತ್ರ ಕಾರ್ಯಕ್ಕೆ ಕಳುಹಿಸಲಾಗುತ್ತದೆ. ಈಗಲೂ ಪಾರಂಪರಿಕ ರೀತಿಯಲ್ಲೇ ನಡೆಯುತ್ತಿರುವ ಈ ಕಸುಬುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ, ಆಧುನಿಕ ಮಾರುಕಟ್ಟೆಯ ನೀತಿನಿಯಮಗಳಿಗನುಗುಣವಾಗಿ, ಜನರನ್ನು ಆಕರ್ಷಿಸುವ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುವುದು ಈ ಕೋರ್ಸ್‌ನ ಪ್ರಮುಖ ಅಂಶವಾಗಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸಂತೆ, ಅಂಗಡಿಗಳಲ್ಲಿ ಕಾಣಿಸಿ ಕೊಳ್ಳುವ ಚಾಪೆ, ಬುಟ್ಟಿ, ಅಡಿಕೆ ಹಾಳೆಯಿಂದ ತಯಾರಿಸುವ ವಿವಿಧ ವಸ್ತುಗಳು, ಗೆರಸಿ, ಮಣ್ಣಿನಿಂದ ತಯಾರಿಸುವ ಮಡಕೆ ಸೇರಿದಂತೆ ವಿವಿಧ ವಸ್ತುಗಳು, ತಮ್ಮ ಗುಣಮಟ್ಟ, ಆಕಾರ, ಗಾತ್ರ, ವಿನ್ಯಾಸ, ವರ್ಣವೈವಿಧ್ಯತೆಯಲ್ಲಿ ಬದಲಾವಣೆಯೊಂದಿಗೆ ‘ಸೇವಾ ಜಾತ್ರೆ’ಯಲ್ಲಿ ಕಾಣಿಸಿಕೊಂಡಿವೆ.

ಈ ಕೋರ್ಸ್‌ನ ವೇಳೆ ಪ್ರತಿ ವಿದ್ಯಾರ್ಥಿಗಳು ಸುಮಾರು 75ರಿಂದ 100 ಗಂಟೆಗಳನ್ನು ಈ ವಸ್ತುಗಳನ್ನು ತಯಾರಿಸುವ ಕೊರಗರು, ಕುಂಬಾರರು, ಕೃಷಿಕರು, ಚಾಪೆ ನೇಯುವವರು, ಗ್ರಾಮೀಣ ಮಹಿಳೆಯರೊಂದಿಗೆ ಕಳೆಯ ಬೇಕಾಗುತ್ತದೆ. ಅವರಿಂದ ಮಾಹಿತಿಗಳನ್ನು ಕಲೆ ಹಾಕಿ ಅವರ ಉತ್ಪನ್ನಗಳ ಗುಣಮಟ್ಟವನ್ನು, ವಿನ್ಯಾಸವನ್ನು ಯಾವ ರೀತಿ ಆಧುನಿಕ ಜಗತ್ತಿಗೆ ಬೇಕಾದಂತೆ ತಯಾರಿಸಬಹುದು ಎಂಬುದನ್ನು ವಿವರಿಸಿ, ಅವರನ್ನು ಹೊಸ ಸವಾಲು ಗಳಿಗೆ ಸಿದ್ಧಗೊಳಿಸಬೇಕಾಗುತ್ತದೆ.

ಹೀಗಾಗಿ ದೇಶದ ನಾನಾ ಭಾಗಗಳಿಂದ ಬರುವ, ಭಾಷೆ, ನಡೆನುಡಿ, ಆಚಾರ ವಿಚಾರಗಳೆಲ್ಲವೂ ಸಂಪೂರ್ಣ ಬೇರೆಯೇ ಆದ ಈ ವಿದ್ಯಾರ್ಥಿಗಳು ಆರು ತಿಂಗಳುಗಳ ಕಾಲ ಜಿಲ್ಲೆಯ ಬುಡಕಟ್ಟು ಜನಾಂಗದವರ ವಿವಿಧ ಉತ್ಪನ್ನಗಳು, ಮಟ್ಟುಗುಳ್ಳ, ಮಲ್ಲಿಗೆ, ಕುಂಬಾರರ ಕೇರಿಯಲ್ಲಿ ಮಡಿಕೆ, ತೆಂಗಿನ ನಾರು, ಅಡಿಕೆ ಹಾಗೂ ಹಾಳೆಯ ವಿವಿಧ ಉತ್ಪನ್ನಗಳ ಸಮಗ್ರ ಅಧ್ಯಯನ ನಡೆಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳೊಂದಿಗೆ, ಅವುಗಳಿಗೆ ತಾವು ಕಂಡುಕೊಂಡ ಪರಿಹಾರ, ಉತ್ಪನ್ನಗಳಿಗೆ ಹೇಗೆ ಆಧುನಿಕ ಮಾರುಕಟ್ಟೆಯಲ್ಲಿ ಅವಕಾಶ ನೀಡಬಹುದು ಎಂಬ ಬಗ್ಗೆ ವಿವರವಾದ, ವಸ್ತುನಿಷ್ಠ ವರದಿಯನ್ನು ನೀಡಬೇಕಾಗುತ್ತದೆ.

ಇದಕ್ಕಾಗಿ ಈ ವಿದ್ಯಾರ್ಥಿಗಳು ತಮ್ಮ ಗುಂಪಿನಲ್ಲಿ ಓರ್ವ ಅಧ್ಯಾಪಕರು ಹಾಗೂ ಮಾರ್ಗದರ್ಶಕರನ್ನು ಒಳಗೊಂಡು ಸ್ಥಳೀಯ ಅನುಭವಿ ಅಥವಾ ಸ್ವಸಹಾಯ ಸಂಘಗಳ ನೆರವು ಪಡೆದು ತಮ್ಮ ಕ್ಷೇತ್ರ ಕಾರ್ಯ ನಡೆಸುತ್ತಾರೆ. ಕೆಲವೊಮ್ಮೆ ವಿವಿಧ ಸರಕಾರಿ ಇಲಾಖೆಗಳ- ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ ಇತ್ಯಾದಿ- ಸಹಕಾರವನ್ನೂ ಪಡೆದುಕೊಳ್ಳಲಾಗುತ್ತದೆ ಎಂದು ಟ್ಯಾಪ್ಮಿಯ ಅಸೋಸಿಯೇಟ್ ಪ್ರೊಪೆಸರ್ ಪೂರ್ಣಿಮಾ ವೆಂಕಟ್ ತಿಳಿಸಿದರು.

ಕುಂಬಾರರು ತಯಾರಿಸುವ ವಿವಿಧ ಮಣ್ಣಿನ ಉತ್ಪನ್ನಗಳ ಕುರಿತು ಆಲೂರಿನಲ್ಲಿರುವ ರಘು ಕುಲಾಲ್ ಅವರ ನೆರವನ್ನು ಪಡೆದುಕೊಳ್ಳಲಾಗಿತ್ತು. ಕುಂದಾಪುರ ತಾಲೂಕು ಆಲೂರಿನಲ್ಲಿ ಕುಂಬಾರ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಒಮ್ಮೆ ಇದ್ದ 20 ಕುಂಬಾರ ಕುಟುಂಬಗಳು ಇದೇ ವೃತ್ತಿಯನ್ನು ಅವಲಂಬಿಸಿದ್ದರೆ ಈಗ 90ಕ್ಕೂ ಅಧಿಕ ಕುಟುಂಬಗಳಿದ್ದರೂ ಆರು ಕುಟುಂಬಗಳನ್ನು ಬಿಟ್ಟು ಬೇರೆ ಯಾರೂ ಈ ವೃತ್ತಿಯನ್ನು ಮಾಡುತ್ತಿಲ್ಲ. ಕುಂಬಾರ ವೃತ್ತಿಗಿಂತ ಕೂಲಿ ಮಾಡಿದರೆ ಹೆಚ್ಚು ಸಂಪಾದನೆ ಮಾಡಲು ಸಾಧ್ಯವಿರುವುದರಿಂದ ಎಲ್ಲರೂ ಕೂಲಿ ಕೆಲಸಕ್ಕೆ ಹೋಗುತಿದ್ದಾರೆ ಎಂದು ರಘು ಕುಲಾಲ ಬೇಸರದ ಧ್ವನಿಯಿಂದ ನುಡಿಯತ್ತಾರೆ.
ಆಲೂರಿನಲ್ಲಿ ತರಬೇತಿ ಕೇಂದ್ರ ಹೊಂದಿರುವ ರಘು ಕುಲಾಲ್ ಇಲ್ಲಿ ಸೆಲ್ಕೋದ ನೆರವಿನಿಂದ ಸೋಲಾರ್ ವಿದ್ಯುತ್‌ನ್ನು ಬಳಸುತಿದ್ದಾರೆ. ಮಣಿಪಾಲದ ಸೇವಾ ಸಂಪರ್ಕದ ಬಳಿಕ ರಘು ಕುಲಾಲ್ ತಯಾರಿಸುವ ವಸ್ತು ವೈವಿದ್ಯತೆ ಬದಲಾಗಿದೆ. ಅವುಗಳ ಗಾತ್ರ, ವಿನ್ಯಾಸ ಆಕರ್ಷಕಗೊಳಿಸಿದ್ದು, ಅವುಗಳಿಗೆ ವಿವಿದ ಬಣ್ಣಗಳನ್ನು ಬಳಸಿ ಜನಸ್ನೇಹಿಯಾಗಿಸಿದ್ದಾರೆ. ತಮ್ಮಲ್ಲೀಗ ಕೆಲವು ಹೆಣ್ಣು ಮಕ್ಕಳು ಕುಂಬಾರಿಕೆ ಕಲಿಯಲು ಬರುತಿದ್ದಾರೆ ಎಂದು ಕುಲಾಲ್ ತಿಳಿಸಿದರು.

ಕೊರಗರ ಬುಟ್ಟಿ ವೈವಿದ್ಯ: ಕೊರಗ ಸಮುದಾಯ ತಯಾರಿಸುವ ವಿವಿಧ ವಸ್ತುಗಳ ಗುಣಮಟ್ಟ ಈಗ ಮೇಲ್ದರ್ಜೆಗೇರಿದೆ.ದೊಡ್ಡ ದೊಡ್ಡ ನಗರಗಳಲ್ಲಿ ಜನರನ್ನು, ಪ್ರವಾಸಿಗರನ್ನು ಆಕರ್ಷಿಸಲು ಹೊಸ ರೀತಿಯ ಉತ್ಪನ್ನಗಳನ್ನು ತಯಾರಿಸಲು ಕುಂಭಾಶಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಎರಡು ತಿಂಗಳ ತರಬೇತಿ ಮುಗಿದಿದ್ದು, ಇನ್ನೂ ನಾಲ್ಕು ತಿಂಗಳ ತರಬೇತಿ ನೀಡಬೇಕಾಗುತ್ತದೆ ಎಂದು ಗಣೇಶ ಕೊರಗ ಕುಂಭಾಶಿ ನುಡಿದರು.

‘ನಮಗೆ ವಿವಿಧ ಉತ್ಪನ್ನ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳಿಗೆ ಕೊರತೆ ಇದೆ. ಅವುಗಳನ್ನು ಕಾಡಿನಿಂದ ತಂದು ನಾವೇ ಸಿದ್ಧಗೊಳಿಸಬೇಕಾಗುತ್ತದೆ. ಇದರಿಂದ ಬರುವ ಆದಾಯಕ್ಕೆ ಹೋಲಿಸಿದರೆ ಕೂಲಿ ಕೆಲಸವೇ ಉತ್ತಮ ಎಂಬ ಭಾವನೆ ನಮ್ಮವರಲ್ಲಿದೆ. ಹೀಗಾಗಿ ಯುವಜನರನ್ನು ಮತ್ತೆ ಕುಲಕಸುಬಿನತ್ತ ಸೆಳೆಯಲು ತುಂಬಾ ಕಷ್ಟವಾಗುತ್ತದೆ.’ ಎಂದವರು ನುಡಿದರು.

ಅದೇ ರೀತಿ ಅಡಿಕೆ ಹಾಗೂ ಅಡಿಕೆ ಉಪಉತ್ಪನ್ನಗಳಲ್ಲೂ ನವೀನತೆಯನ್ನು ಸೇವಾ ತಂಡ ಸೂಚಿಸಿದೆ. ಅಡಿಕೆ ಹಾಳೆಯಿಂದ ತಯಾರಿಸುವ ಊಟದ ತಟ್ಟೆ ಸೇರಿದಂತೆ ವಿವಿಧ ವಸ್ತುಗಳಿಗೆ ಈಗ ದೇಶದ ನಾನಾ ಭಾಗ ಮತ್ತು ವಿದೇಶ ಗಳಿಂದ ತುಂಬಾ ಬೇಡಿಕೆ ಇದೆ. ಅದೇ ರೀತಿ ಅಡಿಕೆಯಿಂದ ಗುಟ್ಕಾದ ಬದಲು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಈ ಬಗ್ಗೆ ಕೆಲವು ಕಂಪೆನಿಯೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಸೇವಾ ವಿದ್ಯಾರ್ಥಿ ಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News