ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿಯಿಂದ 130 ಕೋಟಿ ಭಾರತೀಯರಿಗೆ ಅವಮಾನ: ಎನ್‌ಸಿಪಿ

Update: 2020-01-27 16:09 GMT
ಫೋಟೊ ಕೃಪೆ: twitter.com/AdnanSamiLive

ಮುಂಬೈ, ಜ. 27: 2016ರಲ್ಲಿ ಭಾರತೀಯ ಪೌರತ್ವ ಪಡೆದುಕೊಂಡ ಪಾಕಿಸ್ತಾನಿ ಮೂಲದ ಗಾಯಕ ಅದ್ನಾನ್ ಸಮಿ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಸೋಮವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎನ್‌ಸಿಪಿ, ಇದು 130 ಕೋಟಿ ಭಾರತೀಯರಿಗೆ ಮಾಡಿದ ಅವಮಾನ. ಅಲ್ಲದೆ, ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕುರಿತು ಪ್ರಶ್ನೆಗಳನ್ನು ಎದುರಿಸುತ್ತಿರುವ ಎನ್‌ಡಿಎ ಸರಕಾರದ ತೇಪೆ ಹಚ್ಚುವ ಪ್ರಯತ್ನ ಎಂದು ಹೇಳಿದೆ.

‘ಜೈ ಮೋದಿ’ ಎಂದು ಘೋಷಣೆ ಕೂಗುವ ಮೂಲಕ ಪಾಕಿಸ್ತಾನಿ ಪ್ರಜೆ ಕೂಡ ಇಂದು ಭಾರತೀಯ ಪೌರತ್ವ ಪಡೆಯಬಹುದು ಎಂದು ಮಹಾರಾಷ್ಟ್ರ ಅಲ್ಪಸಂಖ್ಯಾತ ಅಭಿವೃದ್ಧಿ ಖಾತೆ ಸಚಿವ ಹಾಗೂ ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್ ಹೇಳಿದ್ದಾರೆ.

ಪಾಕಿಸ್ತಾನಿ ವಾಯುಪಡೆಯ ಮುಖ್ಯಸ್ಥನಿಗೆ ಲಂಡನ್‌ನಲ್ಲಿ ಜನಿಸಿದ ಸಮಿ 2015ರಲ್ಲಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅನಂತರ 2016ರಲ್ಲಿ ಅವರು ಭಾರತದ ಪೌರರಾದರು. ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ 118 ಸಾಧಕರಲ್ಲಿ ಇವರ ಹೆಸರು ಕೂಡ ಇದೆ. ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಅದ್ನಾನ್ ಸಮಿ ಅವರ ರಾಜ್ಯ ಮಹಾರಾಷ್ಟ್ರ ಎಂದು ಹೇಳಲಾಗಿದೆ. ‘‘ಯಾರಾದರೂ ಜೈ ಮೋದಿ ಎಂದು ಘೋಷಣೆ ಕೂಗಿದರೆ, ಅವರು ಭಾರತದ ಪೌರತ್ವ ಪಡೆಯುವರು ಹಾಗೂ ಪದ್ಮ ಪ್ರಶಸ್ತಿ ಪಡೆಯುವರು. ಅದ್ನಾನಿ ಸಮಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಎನ್‌ಡಿಎ ಸರಕಾರ ತೇಪೆ ಹಚ್ಚುವ ಕ್ರಿಯೆ’’ ಎಂದು ಮಲ್ಲಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News