ಅಂತಿಮ-8ರ ಘಟ್ಟಕ್ಕೇರಿದ ಸಿಮೊನಾ ಹಾಲೆಪ್

Update: 2020-01-27 18:05 GMT

ಮೆಲ್ಬೋರ್ನ್, ಜ.27: ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸಿಮೊನಾ ಹಾಲೆಪ್ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಸೋಮವಾರ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

4ನೇ ಶ್ರೇಯಾಂಕದ ಹಾಲೆಪ್ ಮಹಿಳೆಯರ ಸಿಂಗಲ್ಸ್‌ನ ಅಂತಿಮ-16ರ ಪಂದ್ಯದಲ್ಲಿ 6-4, 6-4 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಇಸ್ಟೋನಿಯದ ಅನೆಟ್ ಕಾಂಟವೆಟ್ ಅಥವಾ ಶ್ರೇಯಾಂಕರಹಿತ ಪೊಲೆಂಡ್‌ನ ಇಗಾ ಸ್ವಿಯಟೆಕ್‌ರನ್ನು ಎದುರಿಸಲಿದ್ದಾರೆ.

ಮಾಜಿ ನಂ.1 ಆಟಗಾರ್ತಿ ಹಾಲೆಪ್ 2018ರ ಫೈನಲ್‌ನಲ್ಲಿ ಕರೊಲಿನ್ ವೋಝ್ನಿಯಾಕಿ ವಿರುದ್ಧ ಸೋತಿದ್ದರು. ಮೆಲ್ಬೋರ್ನ್‌ನಲ್ಲಿ ಈ ತನಕ ಆಡಿರುವ 4 ಪಂದ್ಯಗಳಲ್ಲಿ ಒಂದೂ ಸೆಟ್‌ನ್ನು ಕೈಬಿಟ್ಟಿಲ್ಲ. ಅಶ್ಲೆ ಬಾರ್ಟಿ ಬಳಿಕ ಕಣದಲ್ಲಿರುವ ಎರಡನೇ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿರುವ 28ರ ಹರೆಯದ ಹಾಲೆಪ್ ಇದೀಗ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

2ನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ, ಚಾಂಪಿಯನ್ ಹಾಗೂ 3ನೇ ಶ್ರೇಯಾಂಕದ ನವೊಮಿ ಒಸಾಕಾ ಹಾಗೂ ಆರನೇ ಶ್ರೇಯಾಂಕದ ಸೆರೆನಾ ವಿಲಿಯಮ್ಸ್ ಮೂರನೇ ಸುತ್ತಿನಲ್ಲಿ ಸೋತಿರುವ ಅಗ್ರ-10 ಶ್ರೇಯಾಂಕಿತ ಆಟಗಾರ್ತಿಯರಾಗಿದ್ದಾರೆ. ಹಾಲೆಪ್ ಬೆಲ್ಜಿಯಂನ ಮಾರ್ಟೆನ್ಸ್‌ರನ್ನು ಕಳೆದ 3 ಪಂದ್ಯಗಳಲ್ಲಿ ಎರಡನೇ ಬಾರಿ ಮಣಿಸಿದ್ದಾರೆ. ಇದರಲ್ಲಿ 2018ರ ಫ್ರೆಂಚ್ ಓಪನ್‌ನ ಅಂತಿಮ-16ರ ಪಂದ್ಯವೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News