ರಾತ್ರಿ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ

Update: 2020-01-27 18:22 GMT

ಹೊಸದಿಲ್ಲಿ, ಜ.27: ಕೆಲವು ಫ್ರಾಂಚೈಸಿಗಳ ಒತ್ತಡದ ಹೊರತಾಗಿಯೂ ಐಪಿಎಲ್‌ನ ರಾತ್ರಿ ಪಂದ್ಯಗಳ ಸಮಯವನ್ನು ರಾತ್ರಿ 8ರ ಬದಲಿಗೆ 7:30ಕ್ಕೆ ಬದಲಿಸದೇ ಇರಲು ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಆಡಳಿತ ಮಂಡಳಿ ನಿರ್ಧರಿಸಿದೆ.

13ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯು ಮಾ.29ರಿಂದ ಆರಂಭವಾಗಲಿದ್ದು, ಮೇ 24ರಂದು ಫೈನಲ್ ಪಂದ್ಯ ನಡೆಯಲಿದೆ.

ಸಹಾಯಾರ್ಥವಾಗಿ ಐಪಿಎಲ್ ಆರಂಭಕ್ಕೆ ಮೊದಲು ಎಲ್ಲ ಅಗ್ರ ಅಂತರ್‌ರಾಷ್ಟ್ರೀಯ ಆಟಗಾರರ ನಡುವೆ ಆಲ್ ಸ್ಟಾರ್ಸ್ ಗೇಮ್ ಆಯೋಜಿಸಲು ಬಿಸಿಸಿಐ ಹಸಿರು ನಿಶಾನೆ ತೋರಿದೆ.

  ‘‘ಈ ವರ್ಷದ ಐಪಿಎಲ್ ಫೈನಲ್ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯುವುದಿಲ್ಲ. ಮುಂಬೈನಲ್ಲೇ ನಡೆಯಲಿದೆ. ಐಪಿಎಲ್ ರಾತ್ರಿ ಪಂದ್ಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ರಾತ್ರಿ ಪಂದ್ಯ ಈ ಹಿಂದಿನಂತೆಯೇ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ರಾತ್ರಿ 7:30ಕ್ಕೆ ಆರಂಭಿಸುವ ಕುರಿತಂತೆ ಚರ್ಚೆ ನಡೆಸಲಾಗಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ’’ ಎಂದು ಸುದ್ದಿಗಾರರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ತಿಳಿಸಿದ್ದಾರೆ.

ಐಸಿಸಿ ನೂತನ ನಿಯಮದ ಪ್ರಕಾರ ಆಟಗಾರ ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್‌ನ ವೇಳೆ ಗಾಯಗೊಂಡರೆ, ಗಾಯಗೊಂಡಿರುವ ಆಟಗಾರ ಪಂದ್ಯದಿಂದ ಹಿಂದೆ ಸರಿಯಬಹುದು. ಮ್ಯಾಚ್ ರೆಫರಿ ಬದಲಿ ಆಟಗಾರನ ವ್ಯವಸ್ಥೆ ಮಾಡಬಹುದು. ಈ ಬಾರಿಯ ಐಪಿಎಲ್‌ನಲ್ಲಿ ಐದು ದಿನ ಮಾತ್ರ ದಿನಕ್ಕೆ ಎರಡು ಪಂದ್ಯಗಳು(ಸಂಜೆ 4, ರಾತ್ರಿ 8 ಗಂಟೆ)ನಡೆಯಲಿವೆ ಎಂದು ಗಂಗುಲಿ ಸ್ಪಷ್ಟಪಡಿಸಿದರು.

ಕ್ರಿಕೆಟ್ ಸಲಹಾ ಸಮಿತಿಯ ಕುರಿತು ಪ್ರತಿಕ್ರಿಯಿಸಿದ ಮಾಜಿ ನಾಯಕ ಗಂಗುಲಿ,‘‘ಸಮಿತಿಯನ್ನು ಅಂತಿಮಗೊಳಿಸಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ ಶಾ ಶೀಘ್ರವೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ಸುಲಕ್ಷಣ ನಾಯಕ್ ಹಾಗೂ ಮದನ್ ಲಾಲ್ ಸಮಿತಿಯಲ್ಲಿರುತ್ತಾರೆ. ಗೌತಮ್(ಗಂಭೀರ್)ಇರುವುದಿಲ್ಲ’’ ಎಂದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ರಣಜಿ ಟ್ರೋಫಿಯಲ್ಲಿ ಭಾಗವಹಿಸುತ್ತಾರೆಯೇ?ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗುಲಿ,‘‘ಪಾಂಡ್ಯ ಈ ವರೆಗೆ ಫಿಟ್ ಆಗಿಲ್ಲ. ಅವರು ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಫಿಟ್ನೆಸ್ ಪಡೆಯಲು ಇನ್ನಷ್ಟು ಸಮಯದ ಅಗತ್ಯವಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News