ಅಂಡರ್-19 ವಿಶ್ವಕಪ್‌ ನಾಳೆ ಕ್ವಾರ್ಟರ್ ಫೈನಲ್ ಪಂದ್ಯ

Update: 2020-01-27 18:23 GMT

ಪಾಟ್‌ಚೆಫ್‌ಸ್ಟ್ರೂಮ್(ದ.ಆಫ್ರಿಕಾ), ಜ.27: ಭಾರತದ ರವಿ ಬಿಶ್ನೋಯ್ ಹಾಗೂ ಆಸ್ಟ್ರೇಲಿಯದ ತನ್ವೀರ್ ಸಂಘಾ ನಡುವಿನ ಸ್ಪಿನ್ ಹೋರಾಟಕ್ಕೆ ಸಾಕ್ಷಿಯಾಗಲಿರುವ ಐಸಿಸಿ ಅಂಡರ್-19 ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದೆ.

 ಇತ್ತೀಚೆಗಿನ ದಿನಗಳಲ್ಲಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ. ಇದಕ್ಕೆ ಜೂನಿಯರ್ ಕ್ರಿಕೆಟ್ ಕೂಡ ಹೊರತಾಗಿಲ್ಲ. ಪ್ರತಿಭಾವಂತ ಸ್ಪಿನ್ನರ್ ರವಿ ಬಿಶ್ನೋಯ್ ಟೂರ್ನಮೆಂಟ್‌ನ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿ ಹೊರಹೊಮ್ಮಿದ್ದು, ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮೇಲುಗೈ ಸಾಧಿಸಲು ನೆರವಾಗುವ ಸಾಧ್ಯತೆಯಿದೆ.

ಟೂರ್ನಿಯಲ್ಲಿ ಈ ತನಕ ಆಡಿರುವ 3 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿರುವ ರವಿ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ 30 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದ್ದರು. ಇತ್ತೀಚೆಗೆ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ರವಿ ಬಿಶ್ನೋಯ್ 2 ಕೋ.ರೂ.ಗೆ ಬಿಕರಿಯಾಗಿದ್ದರು. ಮತ್ತೊಂದೆಡೆ, ಆಸ್ಟ್ರೇಲಿಯದ ಸ್ಪಿನ್ನರ್ ತನ್ವೀರ್ ಸಂಘಾ ಕೂಡ ಟೂರ್ನಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಉರುಳಿಸಿದ್ದು, ಕ್ರಿಕೆಟ್ ಶಿಶು ನೈಜೀರಿಯ ವಿರುದ್ಧ 14 ರನ್‌ಗೆ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ತನ್ವೀರ್ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದರು.

ಮಂಗಳವಾರ ಇಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯದ ಗೆಲುವಿಗೆ ರವಿ ಹಾಗೂ ತನ್ವೀರ್ ಅವರ ಪಾತ್ರ ಮಹತ್ವದ್ದಾಗಿದೆ. ಆಸ್ಟ್ರೇಲಿಯ ತಂಡ ಜೂನಿಯರ್ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧದ ತನ್ನ ಕಳಪೆ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವತ್ತ ಚಿತ್ತವಿರಿಸಿದೆ.

2013ರ ಬಳಿಕ ಕಳೆದ ಐದು ಅಂಡರ್-19 ಪಂದ್ಯಗಳಲ್ಲಿ ವಿವಿಧ ತಂಡಗಳ ವಿರುದ್ಧ ಆಡಿರುವ ಭಾರತ 4ರಲ್ಲಿ ಜಯ ಸಾಧಿಸಿದ್ದರೆ,ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಯಶಸ್ವಿ ಜೈಸ್ವಾಲ್(2 ಅರ್ಧಶತಕ), ಜೈಸ್ವಾಲ್ ಅವರ ಆರಂಭಿಕ ಜೊತೆಗಾರ ದಿವ್ಯಾಂಶ್ ಸಕ್ಸೇನ ಹಾಗೂ ನಾಯಕ ಪ್ರಿಯಂ ಗರ್ಗ್ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಉತ್ತರಪ್ರದೇಶದ ನೀಳಕಾಯದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ನಿರಂತರವಾಗಿ ಪ್ರತಿ ಗಂಟೆಗೆ 140 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಆರಂಭದಲ್ಲಿ ದುಬಾರಿ ಬೌಲರ್ ಆಗಿದ್ದ ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೇಕರ್ ಆ ಬಳಿಕ ತಿರುಗೇಟು ನೀಡಿ ಮೂರು ನಿರ್ಣಾಯಕ ವಿಕೆಟ್ ಪಡೆದಿದ್ದರು.

ಜೈಸ್ವಾಲ್, ಗರ್ಗ್, ತಿಲಕ್ ವರ್ಮಾ ಹಾಗೂ ಸಕ್ಸೇನ ಉಪಸ್ಥಿತಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿರುವಂತೆ ಕಾಣುತ್ತಿದೆ. ಆಸ್ಟ್ರೇಲಿಯದ ನಾಯಕ ಮೆಕೆಂಝಿ ಹಾರ್ವೆ(ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಇಯಾನ್ ಹಾರ್ವೆ ಅಳಿಯ)ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಹಾರ್ವೆ ಇಂಗ್ಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 65 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News