ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಕಟ್ಟಡ ಉದ್ಘಾಟನೆ

Update: 2020-01-28 13:41 GMT

ಕಾಸರಗೋಡು :  ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿಸುವ ಮೂಲಕ ಬಡಜನತೆಗೆ ಅತ್ಯುತ್ತಮ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿದೆ. ಇದು ರಾಜ್ಯದ ಆರೋಗ್ಯ ವಲಯಕ್ಕೆ ನೀಡುತ್ತಿರುವ ಕೊಡುಗೆಯಾಗಿದ್ದು,  ಇದರಿಂದ ಸರಕಾರಿ ಆಸ್ಪತ್ರೆಗಳತ್ತ  ಜನರ ಒಲವು ಹೆಚ್ಚಾಗಿದೆ ಎಂದು ಕೇರಳ  ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಹೇಳಿದರು.

ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ನೇತೃತ್ವದಲ್ಲಿ ಕುಂಬಳೆಯಲ್ಲಿ ನಿರ್ಮಿಸಲಾದ ಕುಂಬಳೆ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಸಾರ್ವಜನಿಕ ಆರೋಗ್ಯ ವಲಯ ಎಲ್ಲ ವಿಭಾಗದ ಜನತೆಯ ಸೊತ್ತಾಗಿ ಪರಿಣಮಿಸಿದೆ. ಈ ರಂಗದ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರ ವಹಿಸಿರುವ ನೇತೃತ್ವದ ಪರಿಣಾಮ ಜನಪರ ಫಲಿತಾಂಶ ಲಭಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.

ಸರಕಾರಿ ಆರೋಗ್ಯ ಕೇಂದ್ರಗಳನ್ನು ಎಲ್ಲ ವಲಯದ ಜನತೆಯ ಆಸರೆ ತಾಣಗಳಾಗಿ ಮಾರ್ಪಡಿಸುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ. ಈ ಸಾಧನೆಯನ್ನು ಗಮನಿಸಿ ಕೇಂದ್ರ ಸರಕಾರ ನೀತಿ ಆಯೋಗ ಪಟ್ಟಿಯಲ್ಲಿ ರಾಜ್ಯದ ಆರೋಗ್ಯ ವಲಯಕ್ಕೆ ಪ್ರಥಮ ಸ್ಥಾನ ಒದಗಿಸಿದೆ. ಈ ನಿಟ್ಟಿನಲ್ಲಿ ಸರಕಾರಿ ಆರೋಗ್ಯಗಳಂತೆಯೇ ಖಾಸಗಿ ಆರೋಗ್ಯ ಸಂಸ್ಥೆಗಳ ಕೊಡುಗೆಯೂ ಅನನ್ಯವಾಗಿದೆ. ಆರೋಗ್ಯ ವಲಯವನ್ನು ಇನ್ನಷ್ಟು ಸದೃಢಗೊಳಿಸುವ ಉದ್ದೇಶದಿಂದ ಸಹಕಾರಿ-ಖಾಸಗಿ ವಲಯಗಳ ಇನ್ನಷ್ಟು ಬೆಂಬಲ ಪಡೆಯಲಾಗುವುದು ಎಂದರು.

ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಾಜಿ ಸಂಸದ ಪಿ.ಕರುಣಾಕರನ್, ಶಾಸಕರಾದ ಎಂ.ಸಿ. ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿ ರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ, ಮಾಜಿ ಶಾಸಕರಾದ ಸಿ.ಎಚ್.ಕುಂಞಾಂಬು, ಪಿ.ರಾಘವನ್, ಕೆ. ಕುಂಞಿ ರಾಮನ್, ಕೆ.ಪಿ.ಸತೀಶ್ಚಂದ್ರನ್, ಕೆ.ವಿ.ಕುಂಞಿ ರಾಮನ್, ಸಹಕಾರಿ  ಇಲಾಖೆ ಜತೆ ರೆಜಿಸ್ಟ್ರಾರ್ ವಿ. ಮಹಮ್ಮದ್ ನೌಷಾ, ಬ್ಲೋಕ್ ಪಂಚಾಯತ್ ಅಧ್ಯಕ್ಷರುಗಳಾದ ಎ.ಕೆ.ಎಂ.ಅಶ್ರಫ್, ಓಮನಾ ರಾಮಚಂದ್ರನ್, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಪುಂಡರೀಕಾಕ್ಷ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೆ.ಅರುಣ, ಸಹಕಾರಿ ಆಸ್ಪತ್ರೆ ಸೊಸೈಟಿ ಅಧ್ಯಕ್ಷ ಎ. ಚಂದ್ರಶೇಖರ, ಪದಾಧಿಕಾರಿಗಳು, ಜನಪ್ರತಿನಿಧಿಗಳು  ಉಪಸ್ಥಿತರಿದ್ದರು.

ಜನತೆಯ ನಿರೀಕ್ಷೆಯನ್ನೂ ಮೀರಿ ಬೆಳೆದ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ

ಜನತೆಯ ನಿರೀಕ್ಷೆಯ ಮೀರಿ ದಾಟಿ ಬೆಳೆದು ನಿಂತ ಕುಂಬಳೆ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೊಂಡಿದೆ. ಕುಂಬಳೆ ನಗರದಲ್ಲಿ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘ ಖರೀದಿಸಿದ 58.5 ಸೆಂಟ್ಸ್ ಜಾಗದಲ್ಲಿ ಹತ್ತು ಕೋಟಿ ರೂ. ವೆಚ್ಚದಲ್ಲಿ ನೂತನ ಸಹಕಾರ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗಿದೆ.

ನೂತನ ಕಟ್ಟಡದಲ್ಲಿ ಮೂರು ಜನರಲ್ ವಾರ್ಡ್ ಗಳು, ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಗಳಿವೆ. 4 ಅಂತಸ್ತಿನ ಕಟ್ಟಡದಲ್ಲಿ ರ್ಯಾಂಪ್, ಲಿಫ್ಟ್ ಸೌಲಭ್ಯಗಳಿವೆ. ಐ.ಸಿ.ಯು, ಎನ್.ಐ.ಸಿಯು., ಶಸ್ತ್ರಚಿಕಿತ್ಸೆ ಕೊಠಡಿ, ಫಾರ್ಮಸಿ, ಪ್ರಯೋಗಾಲಯ, ಸ್ಕ್ಯಾನಿಂಗ್, 24 ತಾಸುಗಳೂ ಚಟುವಟಿಕೆ ನಡೆಸುವ ತುರ್ತು ವಿಭಾಗ ಇತ್ಯಾದಿಗಳೂ ಇವೆ. ತ್ಯಾಜ್ಯ ಸಂಸ್ಕರಣೆ, ಬಟ್ಟೆ ಒಗೆಯುವುದಕ್ಕೆ ಇತ್ಯಾದಿಗಳಿಗೆ ಪ್ರತ್ಯೇಕ ಯಂತ್ರೋಪಕರಣಗಳಿವೆ.

1988ರಲ್ಲಿ ನೋಂದಣಿ ನಡೆಸಿರುವ ಜಿಲ್ಲಾ ಆಸ್ಪತ್ರೆ ಸಹಕಾರಿ ಸಂಘ ವ್ಯಾಪ್ತಿಯಲ್ಲಿ 1990ರಲ್ಲಿ ಕುಂಬಳೆಯ ಬಾಡಿಗೆ ಕಟ್ಟಡದಲ್ಲಿ ಕುಂಬಳೆ ಸಹಕಾರಿ ಆಸ್ಪತ್ರೆ ಚಟುವಟಿಕೆ ಆರಂಭಿಸಿತ್ತು. ಸಂಘದ ವ್ಯಾಪ್ತಿಯಲ್ಲಿ ಚೆಂಗಳ ಇ.ಕೆ.ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆ ಮತ್ತು ಕುಂಡಂಕುಳಿಯ ಕ್ಲಿನಿಕ್ ಚಟುವಟಿಕೆ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News