ಉಚ್ಚಿಲ: ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅವಕಾಶ ನೀಡದ ಆರೋಪ; ಗ್ರಾಪಂ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆ

Update: 2020-01-28 09:38 GMT

ಕಾಪು, ಜ.28: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿಯ ವಿವಾದಕ್ಕೆ ಸಂಬಂಧಿಸಿ ದಲಿತರ ಶವ ಸಂಸ್ಕಾರಕ್ಕೆ ಅವಕಾಶ ಇಲ್ಲದಿರುವುದನ್ನು ವಿರೋಧಿಸಿ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ದಲಿತರೊಬ್ಬರ ನಿಧನದ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆಯನ್ನು ನಡೆಸಲಾಯಿತು.

ಎರ್ಮಾಳ್ ಬಡ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರ ನಡೆಸಲು ಶತಮಾನಗಳಿಂದ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ದಸಂಸ ಹಲವು ವರ್ಷಗಳಿಂದ ಹೋರಾಟಗಳನ್ನು ನಡೆಸಿ ಕೊಂಡು ಬರುತ್ತಿದೆ. ಈ ಸರಕಾರ ಸ್ಮಶಾನದಲ್ಲಿ ಕೇವಲ ಒಂದು ಜಾತಿಯವರಿಗೆ ಮಾತ್ರ ಶವ ಸಂಸ್ಕಾರಕ್ಕೆ ಅವಕಾಶ ನೀಡಿ, ದಲಿತರಿಗೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ವಿವಾದಗಳ ಹಿನ್ನೆಲೆಯಲ್ಲಿ ಈ ಸ್ಮಶಾನವನ್ನು ಈಗ ಬಂದ್ ಮಾಡಲಾಗಿದೆ.

ಇಂದು ನಿಧನರಾದ ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಮುಳ್ಳಗುಡ್ಡೆಯ ಪರಿಶಿಷ್ಟ ಜಾತಿಗೆ ಸೇರಿದ ಶಂಕರ್(80) ಎಂಬವರ ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲದ ಕಾರಣ, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ನೇತೃತ್ವದಲ್ಲಿ ಗ್ರಾಪಂ ಕಚೇರಿ ಮುಂದೆ ಕಟ್ಟಿಗೆಗಳನ್ನು ಇರಿಸಿ ಚಟ್ಟವನ್ನು ಅಣಿಗೊಳಿಸಿ, ಪ್ರತಿಭಟನೆಯನ್ನು ನಡೆಸಿದೆ. ಮೃತರ ಅಂತ್ಯಕ್ರಿಯೆ ನಡೆಸಲು ಸ್ಮಶಾನದ ವ್ಯವಸ್ಥೆ ಮಾಡುವಂತೆ ದಸಂಸ ಮುಖಂಡರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಳಪು ಗ್ರಾಪಂನ ಸ್ಮಶಾನದಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಆದರೆ ಇದನ್ನು ನಿರಾಕರಿಸಿದ ಮುಖಂಡರು, ಬಡಾ ಗ್ರಾಪಂ ವ್ಯಾಪ್ತಿಯಲ್ಲಿಯೇ ಮೃತದೇಹ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ಪರಿಹಾರಿಸುವಂತೆ ಪಟ್ಟುಹಿಡಿದಿರುವ ಪ್ರತಿಭಟನಕಾರರು, ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News