ಮಹಿಳೆಯರಿಂದ ಸತ್ಯಾಗ್ರಹ, ಮಾನವ ಸರಪಳಿ: ಸಾಜಿದ ಮುಮಿನ್

Update: 2020-01-28 09:16 GMT

ಮಂಗಳೂರು, ಜ.28: ಮಹಾತ್ಮ ಗಾಂಧಿ ಹುತಾತ್ಮರಾದ ದಿನವಾದ ಜನವರಿ 30ರಂದು ‘ವಿ ದಿ ಪೀಪಲ್’ ಸಂಘಟನೆಯ ಆಶ್ರಯದಲ್ಲಿ ಮಹಿಳೆಯರು ಸಂವಿಧಾನ ರಕ್ಷಣೆಯ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಂಘಟನೆಯ ಪ್ರಮುಖರಾದ ಸಾಜಿದ ಮುಮಿನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಗಾಂಧಿ ಹುತಾತ್ಮರಾದ 72 ವರ್ಷಗಳ ಬಳಿಕ ಅವರ ಆಶಯಗಳಿಂದ ದೂರ ಸರಿದಿರುವ ವಿಷಾದದ ಜತೆಗೆ ಗಾಂಧಿ ಹಂತಕ ಗೋಡ್ಸೆಯನ್ನು ಮೆಚ್ಚಿಕೊಳ್ಳುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿ ರುವುದು ಆತಂಕದ ಬೆಳವಣಿಗೆಯಾಗಿದೆ. ಹಾಗಾಗಿ ಗಾಂಧಿ ಬಗ್ಗೆ ಹಾಗೂ ಸಂವಿಧಾನದ ಬಗ್ಗೆ ಈ ತಲೆಮಾರಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಈ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿ ಎದುರು ಅಂದು ಬೆಳಗ್ಗೆ 10 ಗಂಟೆಯಿಂದ ಸುಮಾರು 150ರಷ್ಟು ಮಹಿಳೆಯರು ಸಂಜೆ 4.30ರವರೆಗೆ ಸತ್ಯಾಗ್ರಹ ನಡೆಸಲಿದ್ದಾರೆ. ಘೋಷಣೆ, ಮೈಕ್ ರಹಿತ ಮೌನ ಸತ್ಯಾಗ್ರಹ ಇದಾಗಲಿದೆ. ಗಾಂಧೀಜಿ ಹತ್ಯೆಯಾದ ಸಮಯ ಸಂಜೆ 5.17ಕ್ಕೆ ಮಾನವ ಸರಪಳಿಯ ಮೂಲಕ ಹಿಂಸೆಯ ವಿರುದ್ಧ ಐಕ್ಯತೆಯನ್ನು ಸಾರಲಾಗುವುದು ಎಂದು ಅವರು ಹೇಳಿದರು.

ಗಾಂಧೀಜಿ ಇಲ್ಲದ ಸ್ವಾತಂತ್ರ ಹೋರಾಟವನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಗುಂಡಿಕ್ಕಿದ ಗೋಡ್ಸೆಯನ್ನು ಬಹಿರಂಗವಾಗಿ ಬೆಂಬಲಿಸುವುದಕ್ಕೆ 1958ರ ಕಾಲದಲ್ಲಿ ಒಬ್ಬ ಭಾರತೀಯನೂ ಇರಲಿಲ್ಲ. ಗಾಂಧೀಜಿ ಕಣ್ಣೆದುರಿಗೆ ಅಂಬೇಡ್ಕರ್ ದೇಶದ ಪ್ರಥಮ ಕಾನೂನು ಸಚಿವರಾದರು. ಸಂವಿಧಾನ ರಚನಾ ಸಮಿತಿಯ ನೇತೃತ್ವ ವಹಿಸಿ ಉನ್ನತ ಮೌಲ್ಯದ ಸಂವಿಧಾನ ನೀಡಿದರು. ಆದರೆ ಗಾಂಧೀಜಿಯ ಭಾರತ ಬರಬರುತ್ತಾ ಗೋಡ್ಸೆಯನ್ನು ನೆಚ್ಚಿಕೊಳ್ಳಲು ಆರಂಭಿಸಿತು. ಅಂಬೇಡ್ಕರ್ ರಚಿತ ಸಂವಿಧಾನವನ್ನು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅವಮಾನಿಸುವ ಹಾಗೂ ಪ್ರಶ್ನಿಸುವ ಸನ್ನಿವೇಶಗಳು ಸೃಷ್ಟಿಯಾಗತೊಡಗಿತು. ಸಂವಿಧಾನ ಕೊಡ ಮಾಡಿರುವ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ. ಈ ವಿಷಯಗಳ ಕುರಿತು ಇಂದು ಚರ್ಚೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈ ಸತ್ಯಾಗ್ರಹ ಹಾಗೂ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪೊಲೀಸರಿಂದ ಈವರೆಗೂ ಅನುಮತಿ ದೊರಕಿಲ್ಲ. ಜಿಲ್ಲಾಧಿಕಾರಿ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. 250 ಜನರೊಳಗೆ ನಡೆಸುವ ಸತ್ಯಾಗ್ರಹಕ್ಕೆ ಪೊಲೀಸರ ಅನುಮತಿಯ ಅಗತ್ಯವಿಲ್ಲ. ಹಾಗಿದ್ದರೂ ಪೊಲೀಸ್ ಆಯುಕ್ತರು ಪೂರಕವಾಗಿ ಸ್ಪಂದಿಸಲಿದ್ದಾರೆ ಎಂಬ ಭರವಸೆ ನಮಗಿದೆ ಎಂದು ವಿದ್ಯಾ ದಿನಕರ್ ತಿಳಿಸಿದರು.

ಗೋಷ್ಠಿಯಲ್ಲಿ ಟೆರ್ರಿ ಪಾಯಸ್, ಸುಹಾಸಿನಿ ಬಬ್ಬುಕಟ್ಟೆ, ಮೆಹರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News