ಅರಣ್ಯ ಇಲಾಖೆ, ಡಿಎಫ್‌ಓ ವಿರುದ್ಧ ಉಡುಪಿ ಜಿಪಂ ಕೆಂಡಾಮಂಡಲ: ಕ್ರಮಕ್ಕೆ ಸಭೆಯಲ್ಲಿ ನಿರ್ಣಯ

Update: 2020-01-28 14:34 GMT

ಉಡುಪಿ, ಜ.28: ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಬಿಗುವಾದ ಕಾನೂನು ಹಾಗೂ ಅದನ್ನು ಅಕ್ಷರಶ: ಜಾರಿಗೊಳಿಸುವ ಅರಣ್ಯ ಅಧಿಕಾರಿಗಳ ಕ್ರಮ ಗಳಿಂದಾಗಿ ರಸ್ತೆ ನಿರ್ಮಾಣ, ಅಗಲೀಕರಣ, ದುರಸ್ತಿ ಸೇರಿದಂತೆ ಯಾವೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ತಮ್ಮ ಕ್ರಮದ ಕುರಿತು ಸಮರ್ಥಿಸಿಕೊಳ್ಳಲು ಜಿಪಂ ಸಾಮಾನ್ಯ ಸಭೆಗೆ ಹಾಜರಾಗದೇ ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಓ) ಸತತವಾಗಿ ಗೈರುಹಾಜರಾಗುತ್ತಿರುವುದರಿಂದ ಆಕ್ರೋಶಗೊಂಡ ಸದಸ್ಯರು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಒಕ್ಕೊರಳ ನಿರ್ಣಯವನ್ನು ಇಂದು ನಡೆದ 19ನೇ ಸಾಮಾನ್ಯ ಸಭೆಯಲ್ಲಿ ಕೈಗೊಂಡರು.

ಅಧ್ಯಕ್ಷ ದಿನಕರಬಾಬು ಅವರ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಇಂದಿನ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಅರಣ್ಯ ಇಲಾಖೆ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣಕರ್ತರಾಗುತ್ತಾರೆ. ಅರಣ್ಯ ಇಲಾಖೆ ವಿರುದ್ಧ ಜನ ದಂಗೆ ಏಳುವ ಪರಿಸ್ಥಿತಿ ಬಂದಿದೆ ಎಂದೆಲ್ಲಾ ಸದಸ್ಯರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಸುದೀರ್ಘವಾಗಿ ನಡೆದ ಈ ಚರ್ಚೆ ಆರಂಭವಾಗಿದ್ದು ಹಾಲಾಡಿಯ ಜಿಪಂ ಸದಸ್ಯ ರೋಹಿತ್‌ಕುಮಾರ್ ಶೆಟ್ಟಿ ಅವರು ಕಸ್ತೂರಿರಂಗನ್ ವರದಿಯ ಪರಿಣಾಮ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಕುರಿತಂತೆ ಪ್ರಶ್ನೆ ಎತ್ತಿದಾಗ. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಬಹಳಷ್ಟು ಗ್ರಾಮಗಳಲ್ಲಿ ಕಸ್ತೂರಿರಂಗನ್ ವರದಿ ಜಾರಿಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯವಾಗುವುದಿಲ್ಲ. ಅಲ್ಲಿನ ರೈತರು, ಬಡವರು ಇದರಿಂದ ತೀರಾ ಅತಂತ್ರರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ನಿಜವಾದ ಸಮಸ್ಯೆ ಇರುವುದು ಅರಣ್ಯದಂಚಿನಲ್ಲಿರುವ ಬಫರ್ ರೆನ್ 10ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಅಜ್ರಿ, ಸಿದ್ಧಾಪುರ, 74 ಉಳ್ತೂರು ಮುಂತಾದ ಗ್ರಾಮಗಳಲ್ಲಿ. ಅತೀಸೂಕ್ಷ್ಮ ವಲಯಕ್ಕೆ ಸೇರುವ ಇಲ್ಲಿ 800ಕ್ಕೂ ಅಧಿಕ ರೈತರಿದ್ದಾರೆ. ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಂತಿಲ್ಲ. ಇವರಿಗೆ ಏನು ಪರಿಹಾರ ಸೂಚಿಸುತ್ತೀರಿ ಎಂದು ಪ್ರಶ್ನಿಸಿದ ಅವರು, ಈಗ 10ಕಿ.ಮೀ. ವ್ಯಾಪ್ತಿಯ ಈ ಪ್ರದೇಶವನ್ನು ಒಂದು ಕಿ.ಮೀ.ೆ ಇಳಿಸಲು ನಿರ್ಣಯ ಕೈಗೊಳ್ಳಿ ಎಂದರು

ಶಾಸಕರ ಮಧ್ಯಪ್ರವೇಶ:  ಈ ಹಂತದಲ್ಲಿ ಪೂರಕವಾಗಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್, ಅರಣ್ಯದಂಚಿನಲ್ಲಿರುವ ಪರಿಸರ ಸೂಕ್ಷ್ಮವಲಯದಲ್ಲಿ ಅನುಮತಿ ಪಡೆದು ಕಾರ್ಯಾಚರಿಸುತ್ತಿರುವ ಕಲ್ಲುಕೋರೆಗಳನ್ನು ಅರಣ್ಯ ಇಲಾಖೆ ಬಂದ್ ಮಾಡಿಸಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಅಭಿವೃದ್ಧಿಗೆ ಭಾರೀ ಹಿನ್ನಡೆಯುಂಟಾಗುತ್ತಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ, ಮರಳಿನ ಸಮಸ್ಯೆಯಂತೆ ಶೀಘ್ರ ಕಲ್ಲಿನ ಸಮಸ್ಯೆಯೂ ತಲೆ ಎತ್ತಿ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಳ್ಳಲಿದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿನ 14 ಕಲ್ಲುಕೋರೆಗಳಿದ್ದು, ಇವುಗಳ ಸರ್ವೆ ನಡೆಸಲಾಗಿದೆ. ಇವುಗಳಲ್ಲಿ ಮೂರು ಕಲ್ಲುಕೋರೆಗಳಿಗೆ ಅನುಮತಿ ನೀಡಿದ್ದು, ಉಳಿದ 11 ಕೋರೆಗಳ ಪರವಾನಿಗೆಯನ್ನು ವಿವಿಧ ಕಾರಣಗಳಿಗಾಗಿ ತಡೆ ಹಿಡಿಯಲಾಗಿದೆ ಎಂದು ಸಭೆಗೆ ಹಾಜರಾದ ಎಎಫ್‌ಓ ಲೋಹಿತ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ತಮ್ಮ ಹಾಗೂ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಡಿಎಫ್‌ಓ ಅವರು ಸ್ವತಹ ಹಾಜರಾಗಬೇಕೆಂದು ಶಾಸಕರು ಪಟ್ಟುಹಿಡಿದರು. ಈ ಹಂತದಲ್ಲಿ ಸದಸ್ಯರ ಆಕ್ರೋಶವೆಲ್ಲಾ ಡಿಎಫ್‌ಓ ಕಮಲಾ ಅವರತ್ತ ತಿರುಗಿತು. ಒಂದೇ ಒಂದು ಸಾಮಾನ್ಯ ಸಭೆಗೂ ಬಾರದೇ, ಅಭಿವೃದ್ಧಿ ಕಾಮಗಾರಿಗಳನ್ನು ಬೆಂಬಲಿಸದೇ, ಎಲ್ಲದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬಾಬು ಹೆಗ್ಡೆ, ಪ್ರತಾಪ್ ಹೆಗ್ಡೆ ಮಾರಾಳಿ, ಗೌರಿ ದೇವಾಡಿಗ, ಜನಾರ್ದನ ತೋನ್ಸೆ, ಸುಮಿತ್ ಶೆಟ್ಟಿ ಕೌಡೂರು ಸೇರಿದಂತೆ ಸದಸ್ಯರೆಲ್ಲರೂ ಅವರನ್ನು ಕೂಡಲೇ ಸಭೆಗೆ ಕರೆಸುವಂತೆ ಒತ್ತಾಯಿಸಿದರಲ್ಲದೇ, ಇಲ್ಲದಿದ್ದರೆ ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡುವ ನಿರ್ಣು ಕೈಗೊಳ್ಳುವಂತೆ ಒತ್ತಾಯಿಸಿದರು.

ನಿರ್ಣಯ ಕೈಗೊಳ್ಳಲು ವಿಳಂಬ ಮಾಡಿದ, ಸಿಇಓ ಬಳಿ ಚರ್ಚಿಸಲು ಮುಂದಾದ ಅಧ್ಯಕ್ಷರ ಮೇಲೂ ಶಾಸಕರು ಹಾಗೂ ಸದಸ್ಯರು ಸಿಟ್ಟಾದರು. ಕೊನೆಗೂ ಜಿಪಂ ಸದಸ್ಯರು ಸರ್ವಾನುಮತದ ನಿರ್ಣಯಕೈಗೊಂಡು, ಡಿಎಫ್‌ಓ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ನಿರ್ಣಯವನ್ನು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿ ಕೂಡಲೇ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.

ಪಡಿತರ ಸಮಸ್ಯೆ: ಸಭೆಯ ಪ್ರಾರಂಭದಲ್ಲಿ ಬಡವರು ಪಡಿತರ ಪಡೆಯುವಲ್ಲಿ ಬಯೋಮೆಟ್ರಿಕ್ ಹಾಗೂ ಸರ್ವರ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆಯ ಕುರಿತು ಜನಾರ್ದನ ತೋನ್ಸೆ ಸಭೆಯ ಗಮನ ಸೆಳೆದರು. ಪಡಿತರ ವಿತರಣೆಯಲ್ಲಿ ಇ-ಕೆವೈಸಿ ಗೆ ಸರ್ವರ್ ಸಮಸ್ಯೆಯಿಂದ ಜನರಿಗೆ ಪಡಿತರ ಪಡೆಯಲು ಕಷ್ಟವಾಗಿದೆ. ಪ್ರತಿದಿನ ಬೆಳಗಿನಿಂದ ಉದ್ದದ ಕ್ಯೂನಲ್ಲಿ ನಿಂತು ಸರ್ವರ್ ಡೌನ್ ನೆಪದಲ್ಲಿ ಪಡಿತರ ಸಿಗದೇ ನಿರಾಶೆಯಿಂದ ಮನೆಗೆ ಬರಿಗೈಲಿ ಹಿಂದಿರುಗುತಿದ್ದಾರೆ ಎಂದರು.

ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಪ್ರಬಾರ ಉಪನಿರ್ದೇಶಕ ಕುಸುಮಾಧರ್, ಜಿಲ್ಲೆಗೆ ಅಪರಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಕೇವಲ 4 ಗಂಟೆಗಳ ಕಾಲ ಮಾತ್ರ ಸರ್ವರ್ ಬಳಸಲು ಅನುಮತಿ ನೀಡಿದ್ದು, ಪಡಿತರ ಕಾರ್ಡ್ ತಿದ್ದುಪಡಿಯೇ ಬಹಳಷ್ಟು ಸಂಖ್ಯೆಯಲ್ಲಿದೆ. ಹೊಸ ಪಡಿತರ ಕಾರ್ಡು ವಿತರಣೆಯಲ್ಲಿ ಇದೇ ಸಮಸ್ಯೆ ಎದುರಾಗಿದೆ ಎಂದರು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಕಳೆದ ಒಂದು ವರ್ಷದಿಂದ ಜಿಲ್ಲೆಯ ಫಲಾನುಭವಿಗಳಿಗೆ ಸಂದ್ಯಾಸುರಕ್ಷಾ ವೇತನ, ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ಗಳು ಬರುತ್ತಿಲ್ಲ. ಹೆಚ್ಚಿನ ಹಿರಿಯರು ಇದೇ ಹಣವನ್ನು ನಂಬಿದ್ದಾರೆ. ಪ್ರತಿದಿನ ಅಂಚೆಕಚೇರಿಗೆ ಬಂದು ಬರಿಗೈಲು ಮರಳುತಿದ್ದಾರೆ ಎಂದು ಜನಾರ್ದನ ತೋನ್ಸೆ ಹೇಳಿದರು.

ಇದಕ್ಕೆ ಉತ್ತರಿಸಿದ ಉಡುಪಿ ತಹಶೀಲ್ದಾರ್ ಕುರ್ಡೇಕರ್, ಉಡುಪಿಯಿಂದ 852 ಮಂದಿಯ ಅರ್ಜಿ ಹೋಗಿದ್ದು, ಇವರಲ್ಲಿ 200ರಷ್ಟು ಮಂಜೂರಾಗಿ ಬಂದಿದೆ. ಉಳಿದವು ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಈ ಬಗ್ಗೆ ಕ್ರವು ತೆಗೆದು ಕೊಳ್ಳುತ್ತೇವೆ ಎಂದರು.

ಸುರೇಶ್ ಬಟವಾಡೆ ಮಾತನಾಡಿ, ಕಳೆದ ಬೇಸಿಗೆಯಲ್ಲಿ ತಾಲೂಕಿನ ಕೆಲವು ಗ್ರಾಪಂಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದ್ದು, ಬಿಲ್ ಪಾವತಿ ಬಾಕಿ ಇರುವ ಕುರಿತು ಅಧಿಕಾರಿಗಳ ಗಮನ ಸೆಳೆದರು. ಅವರು ಒಪ್ಪಂದದಂತೆ ದರ ನೀಡಬೇಕೆಂದು ಒತ್ತಾಯಿಸುತಿದ್ದು, ಜಿಲ್ಲಾಡಳಿತ ಲೀ.ಗೆ 25 ಪೈಸೆ ದರ ನಿಗದಿ ಮಾಡಿದೆ ಎಂದರು.

ಜಿಲ್ಲೆಯ ಗೇರುಬೀಜ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಪಿಎಫ್ ಸೌಲಭ್ಯ ಪಡೆಯಲು ಸಾಧ್ಯವಾಗದಿರುವ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರಿ, ಸಾಣೂರುಗಳಲ್ಲಿ ಕಂಡುಬಂದಿರುವ ಸಮಸ್ಯೆಗಳ ಕುರಿತು ಶಿಲ್ಪಾ ಜಿ.ಸುವರ್ಣ, ದಿವ್ಯಶ್ರೀ ಅಮೀನ್ ಪ್ರಶ್ನೆಗಳನ್ನು ಎತ್ತಿದರು. 15 ದಿನಗಳಲ್ಲಿ ಈ ಸಮಸ್ಯೆಗಳ ಬಗ್ಗೆ ಕ್ರಮ ವಹಿಸುುದಾಗಿ ಸಿಇಓ, ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಗೇರುಬೀಜ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಪಿಎಫ್ ಸೌಲ್ಯಪಡೆಯಲುಸ್ಯಾವಾಗದಿರುವ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರಿ, ಸಾಣೂರುಗಳಲ್ಲಿ ಕಂಡುಬಂದಿರುವ ಸಮಸ್ಯೆಗಳ ಕುರಿತು ಶಿಲ್ಪಾ ಜಿ.ಸುವರ್ಣ, ದಿವ್ಯಶ್ರೀ ಅಮೀನ್ ಪ್ರಶ್ನೆಗಳನ್ನು ಎತ್ತಿದರು. 15 ದಿನಗಳಲ್ಲಿ ಈ ಸಮಸ್ಯೆಗಳ ಬಗ್ಗೆ ಕ್ರಮ ವಹಿಸುವುದಾಗಿ ಸಿಇಓ, ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಕೌಡೂರು, ಶಿಕ್ಷಣಾ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಜಿಪಂ ಯೋಜನಾ ನಿರ್ದೇಶಕ ಗುರುದತ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News