ಶಾಹೀನ್‌ಬಾಗ್ ಗೆ ಗನ್ ಹಿಡಿದು ನುಗ್ಗಿದ ದುಷ್ಕರ್ಮಿಯನ್ನು ಹಿಡಿದ ಪ್ರತಿಭಟನಾಕಾರರು

Update: 2020-01-28 15:13 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.28: ಮಂಗಳವಾರ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಇಲ್ಲಿಯ ಶಾಹೀನ್‌ ಬಾಗ್‌ಗೆ ಆಗಮಿಸಿದ್ದ ವ್ಯಕ್ತಿಯೋರ್ವ ಗನ್ ಝಳಪಿಸಿದ ಬಳಿಕ ಪ್ರತಿಭಟನಾಕಾರರು ಆತನನ್ನು ಹಿಡಿದಿದ್ದು,ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರವಾನಿಗೆಯಿದ್ದ ಗನ್ ಹೊಂದಿದ್ದ ಈ ವ್ಯಕ್ತಿ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಶಾಹೀನ್‌ಬಾಗ್‌ಗೆ ಭೇಟಿ ನೀಡಿದ್ದ.

ಸಶಸ್ತ್ರ ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನಾ ಸ್ಥಳಕ್ಕೆ ನುಸುಳಿವೆ ಎಂದಿರುವ ಪ್ರತಿಭಟನೆಯ ಸಂಘಟಕರು,‘ಇನ್ನಷ್ಟು ಬಲಪಂಥೀಯ ಗುಂಪುಗಳು ಇಲ್ಲಿಗೆ ಪ್ರವೇಶಿಸಬಹುದು ಮತ್ತು ದಾಳಿ ನಡೆಸಬಹುದು. ಪ್ರತಿಭಟನೆಯಲ್ಲಿ ಸೇರುವಂತೆ,ನಮ್ಮ ಸಂಖ್ಯೆಯನ್ನು ಹೆಚ್ಚಿಸುವಂತೆ ಮತ್ತು ಯಾವುದೇ ಹಿಂಸಾಚಾರವನ್ನು ತಡೆಯುವಂತೆ ನಾವು ಎಲ್ಲರನ್ನು ಕೋರುತ್ತಿದ್ದೇವೆ ’ಎಂದು ಟ್ವೀಟಿಸಿದ್ದಾರೆ.

ಇದೇ ವೇಳೆ ಪಶ್ಚಿಮ ದಿಲ್ಲಿಯ ಬಿಜೆಪಿ ಸಂಸದ ಪ್ರವೇಶ ವರ್ಮಾ ಅವರು ಶಾಹೀನ್‌ ಬಾಗ್ ಪ್ರತಿಭಟನೆಯನ್ನು ಪ್ರಸ್ತಾಪಿಸಿ,‘ಪ್ರತಿಭಟನಾಕಾರರು ನಮ್ಮ ಮನೆಗಳಿಗೆ ನುಗ್ಗಬಹುದು ಹಾಗೂ ನಮ್ಮ ಸೋದರಿಯರು ಮತ್ತು ಪುತ್ರಿಯರ ಮೇಲೆ ಅತ್ಯಾಚಾರವೆಸಗಬಹುದು,ಅವರನ್ನು ಕೊಲ್ಲಬಹುದು. ಶಾಹೀನ್‌ ಬಾಗ್ ಪ್ರತಿಭಟನೆ ಮುಂದುವರಿದರೆ ದಿಲ್ಲಿಯೂ ಕಾಶ್ಮೀರದಂತಹ ಸ್ಥಿತಿಯನ್ನು ಎದುರಿಸಲಿದೆ. ಅಲ್ಲಿ ಕಾಶ್ಮೀರಿ ಪಂಡಿತರ ಸೋದರಿಯರು ಮತ್ತು ಪುತ್ರಿಯರ ಮೇಲೆ ಅತ್ಯಾಚಾರಗಳು ನಡೆದಿದ್ದವು. ಇಂತಹ ಘಟನೆಗಳು ಉತ್ತರ ಪ್ರದೇಶ,ಹೈದರಾಬಾದ್ ಮತ್ತು ಕೇರಳಗಳಲ್ಲೂ ಮುಂದುವರಿದಿದ್ದವು. ದಿಲ್ಲಿಯ ಜನರು ಈಗ ಯೋಚಿಸಿ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿರುವವರೆಗೂ ಜನರು ಸುರಕ್ಷಿತರಾಗಿರುತ್ತಾರೆ. ಬೇರೆ ಯಾರಾದರೂ ಅಧಿಕಾರಕ್ಕೆ ಬಂದರೆ ಇಲ್ಲಿ ಯಾರೂ ಸುರಕ್ಷಿತರಲ್ಲ ’ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News