×
Ad

ಕ್ವಿಟೋವಾರನ್ನು ಕೆಡವಿದ ಬಾರ್ಟಿ ಅಂತಿಮ-4ರ ಸುತ್ತಿಗೆ

Update: 2020-01-28 22:58 IST

ಮೆಲ್ಬೋರ್ನ್, ಜ.28: ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ವಿಶ್ವದ ನಂ.1 ಆಟಗಾರ್ತಿ ಅಶ್ಲೆ ಬಾರ್ಟಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಅಗ್ರ ಶ್ರೇಯಾಂಕದ ಬಾರ್ಟಿ ಏಳನೇ ಶ್ರೇಯಾಂಕದ ಕ್ವಿಟೋವಾರನ್ನು 7-6(8/6), 6-2 ಅಂತರದಿಂದ ಸದೆಬಡಿದು ಮೊದಲ ಬಾರಿ ಸೆಮಿ ಫೈನಲ್ ತಲುಪಿದ್ದಾರೆ.

ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಅವರು ಬಾರ್ಟಿ ಅವರನ್ನು ಸೋಲಿಸಿದ್ದರು. ಇದೀಗ ಬಾರ್ಟಿ ಕಳೆದ ಬಾರಿಯ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡರು.

ಆಸ್ಟ್ರೇಲಿಯದ ಆಟಗಾರ್ತಿ ಬಾರ್ಟಿ ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಸಾಧನೆ ಮಾಡಿದ್ದು, 2019ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಮೊದಲ ಬಾರಿ ವಿಶ್ವ ಮಹಿಳಾ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದರು.

‘‘ಇದು ನಿಜವಾಗಿಯೂ ಅದ್ಭುತ. ಪೆಟ್ರಾ ವಿರುದ್ಧ ಇಂದು ಉತ್ತಮವಾಗಿ ಆಡಬಲ್ಲನೆಂಬ ವಿಶ್ವಾಸ ನನಗಿತ್ತು. ಮೊದಲ ಸೆಟ್ ನಿರ್ಣಾಯಕವಾಗಿತ್ತು’’ ಎಂದು ಬಾರ್ಟಿ ಪ್ರತಿಕ್ರಿಯಿಸಿದರು. ಬಾರ್ಟಿ 1978ರ ಬಳಿಕ ಆಸ್ಟ್ರೇಲಿಯನ್ ಓಪನ್ ಜಯಿಸಿದ ಆಸ್ಟ್ರೇಲಿಯದ ಮೊದಲ ಆಟಗಾರ್ತಿ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕ್ರಿಸ್ ಒ’ನೀಲ್ ಈ ಮೊದಲು ಈ ಸಾಧನೆ ಮಾಡಿದ್ದರು.

ಕೆನಿನ್ ಸೆಮಿ ಫೈನಲ್‌ಗೆ

  15ರ ಹರೆಯದ ಬಾಲಕಿ ಕೊಕೊ ಗೌಫ್ ವೀರೋಚಿತ ಹೋರಾಟಕ್ಕೆ ತೆರೆ ಎಳೆದಿದ್ದ ಅಮೆರಿಕದ ಆಟಗಾರ್ತಿ ಸೋಫಿಯಾ ಕೆನಿನ್ ಇಂದು ಟ್ಯುನಿಶಿಯದ ಅನಸ್ ಜಬೀರ್‌ರ ಐತಿಹಾಸಿಕ ಓಟಕ್ಕೆ ಕಡಿವಾಣ ಹಾಕಿದರು. ಈ ಮೂಲಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಸೆಮಿ ಫೈನಲ್ ಪ್ರವೇಶಿಸಿದರು.

 ಮಾಸ್ಕೋ ಸಂಜಾತೆ 21ರ ಹರೆಯದ ಕೆನಿನ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಗೌಫ್‌ರನ್ನು ಮಣಿಸಿದ್ದರು. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ 14ನೇ ಶ್ರೇಯಾಂಕದ ಕೆನಿನ್ ಶ್ರೇಯಾಂಕರಹಿತ ಜಬೀರ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿದರು. 78ನೇ ರ್ಯಾಂಕಿನ ಜಬೀರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಅರಬ್ ಮಹಿಳೆ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದರು. ಕೆನಿನ್ ಮುಂದಿನ ಸುತ್ತಿನಲ್ಲಿ ಅಶ್ಲೆ ಬಾರ್ಟಿ ಸವಾಲನ್ನು ಎದುರಿಸಲಿದ್ದಾರೆ. ಬಾರ್ಟಿ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವಾರನ್ನು ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News