ನೋಟು ನಿಷೇಧವಾದಾಗ ಸರತಿಯಲ್ಲಿ ಹಲವರು ಸತ್ತಿದ್ದರು, ಶಾಹೀನ್‌ಬಾಗ್ ನಲ್ಲಿ ಸಾಯುತ್ತಿಲ್ಲ ಏಕೆ?
ಕೋಲ್ಕತಾ,ಜ.28: ಮೂರು ವರ್ಷಗಳ ಹಿಂದೆ ನೋಟು ನಿಷೇಧದ ಸಂದರ್ಭದಲ್ಲಿ ಬ್ಯಾಂಕುಗಳಿಂದ ಹಣವನ್ನು ಪಡೆಯಲು ಸರದಿ ಸಾಲುಗಳಲ್ಲಿ ನಿಂತಿದ್ದ ಹಲವರು ಸತ್ತಿದ್ದರು,ಆದರೆ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಶಾಹೀನ್ ಬಾಗ್‌ನಲ್ಲೇಕೆ ಯಾರೂ ಸಾಯುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ ಘೋಷ್ ಅವರು ಮಂಗಳವಾರ ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ಕೋಲ್ಕತಾ ಪ್ರೆಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಘೋಷ್,2-3 ಗಂಟೆಗಳ ಕಾಲ ಸರದಿ ಸಾಲುಗಳಲ್ಲಿ ನಿಂತಿದ್ದ ಜನರು ಮೃತಪಟ್ಟಿದ್ದರು. ಆದರೆ ಶಾಹೀನ್‌ಬಾಗ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು 4-5 ಡಿ.ಸೆ.ನಷ್ಟು ಕಡಿಮೆ ತಾಪಮಾನದಲ್ಲಿ ಧರಣಿ ಕುಳಿತಿದ್ದಾರೆ,ಆದರೆ ಅವರಲ್ಲೊಬ್ಬರೂ ಸಾಯುತ್ತಿಲ್ಲ ಎನ್ನುವುದು ತನಗೆ ಅಚ್ಚರಿಯನ್ನುಂಟು ಮಾಡಿದೆ. ಅಂತಹ ಅಮೃತ ಅವರಲ್ಲೇನಿದೆ? ಇದು ತನಗೆ ಬೆರಗನ್ನುಂಟು ಮಾಡಿದೆ. ಅವರು ಜೀವಂತವಾಗಿ ಉಳಿಯಲು ಅವರಿಗೆ ದೊರೆಯುತ್ತಿರುವ ಪ್ರೋತ್ಸಾಹವಾದರೂ ಏನು ಎಂದು ಪ್ರಶ್ನಿಸಿದರು.
ತನ್ನ ಮುಂದಿನ ಹೇಳಿಕೆಯಲ್ಲಿ ಇದಕ್ಕೊಂದು ಸಂಭಾವ್ಯ ಕಾರಣದ ಸುಳಿವನ್ನೂ ನೀಡಿದ ಘೋಷ್, ಇದು ಅತ್ಯಂತ ಆಸಕ್ತಿಯನ್ನು ಮೂಡಿಸಿದೆ. ಮಹಿಳೆಯರು ಮತ್ತು ಮಕ್ಕಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರು ಅತ್ಯಂತ ಉತ್ಸುಕರಾಗಿದ್ದಾರೆ. ಅವರಿಗೆ ದಿನವೊಂದಕ್ಕೆ 500 ರೂ.ಸಿಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ನಿಜವಾಗಿರಬಹುದು ಅಥವಾ ನಿಜವಲ್ಲದಿರಬಹುದು ಎಂದು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ವಿದೇಶಿ ಹಣಕಾಸಿನ ಕೈವಾಡವಿದೆ ಎಂಬ ಜಾರಿ ನಿರ್ದೇಶನಾಲಯದ ವರದಿಯನ್ನು ಉಲ್ಲೇಖಿಸಿ ಹೇಳಿದರು.
ಸಿಎಎ ವಿರುದ್ಧ ಪ್ರತಿಭಟನಾಕಾರರನ್ನು ಘೋಷ್ ಗುರಿಯಾಗಿಸಿಕೊಂಡಿದ್ದು ಇದೇ ಮೊದಲ ಬಾರಿಯಲ್ಲ. ವಾರದ ಹಿಂದೆ ಅವರು,ಸಿಎಎಗೆ ಅಗತ್ಯ ದಾಖಲೆಗಳನ್ನು ತಾವು ಒದಗಿಸುವುದಿಲ್ಲ ಎಂದು ಹೇಳುತ್ತಿರುವ ‘ಪರಾವಲಂಬಿ’ಗಳು ಶೀಘ್ರವೇ ಬಹಿರಂಗವಾಗಿ ಕಾಣಿಸಿಕೊಳ್ಳಲು ನಾಚಿಕೊಳ್ಳಬೇಕಾಗುತ್ತದೆ ಎಂದಿದ್ದರು.
ಜ.12ರಂದು ಹೇಳಿಕೆಯೊಂದರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಗೊಳಿಸಿದವರನ್ನು ‘ನಾಯಿಗಳಂತೆ’ ಗುಂಡಿಕ್ಕಿ ಕೊಂದಿದ್ದಕ್ಕಾಗಿ ಉತ್ತರ ಪ್ರದೇಶ,ಅಸ್ಸಾಂ ಮತ್ತು ಕರ್ನಾಟಕದಂತಹ ರಾಜ್ಯಗಳನ್ನು ಹೊಗಳಿದ್ದರು ಮತ್ತು ಪ.ಬಂಗಾಳದಲ್ಲಿ ಈ ಕ್ರಮವನ್ನು ಕೈಗೊಳ್ಳದ್ದಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಖಂಡಿಸಿದ್ದರು.