ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಏಡಿ ಸಹಿತ ಆಕರ್ಷಕ ಮೀನುಗಳು !

Update: 2020-01-28 17:40 GMT

ಮಲ್ಪೆ, ಜ.28: ಅಪರೂಪದ ಏಡಿ ಸಹಿತ ಆಕರ್ಷಕ ಬಣ್ಣ ಹಾಗೂ ವಿನ್ಯಾಸದ ಮೀನುಗಳು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಬಲೆಗೆ ಬಿದ್ದಿದ್ದು, ಮಲ್ಪೆ ಬಂದರಿಗೆ ಇಂದು ತರಲಾದ ಈ ಮೀನುಗಳು ಎಲ್ಲರ ಗಮನ ಸೆಳೆದವು.

ಮಲ್ಪೆ ಹನುಮನಗರದ ಪ್ರಶಾಂತ್ ಕುಂದರ್ ಎಂಬವರ ಹನುಮ ಶಾರದೆ ಎಂಬ ಆಳ ಸಮುದ್ರ ಮೀನುಗಾರಿಕೆಯ ಬೋಟಿನ ಬಲೆಗೆ ಕೆಲವೇ ಕೆಲವು ಈ ಮೀನುಗಳು ಬಿದ್ದಿದ್ದು, ಇವುಗಳನ್ನು ಸ್ಪ್ಯಾನರ ಕ್ರಾಬ್(ಏಡಿ), ಹಳದಿ ಬಾಲದ ಗೊಬ್ಬರೆ ಮೀನು (ಕೊಳಾಜಿ ಮೀನು) ಹಾಗೂ ನೀಲಿ ಮತ್ತು ಹಳದಿ ಗೊಬ್ಬರೆ ಮೀನು ಎಂಬುದಾಗಿ ಕಾರವಾರ ಕರ್ನಾಟಕ ವಿಶ್ವವಿದ್ಯಾನಿಲಯದ ಕಡಲಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಶಿವಕುಮಾರ್ ಹರಗಿ ಗುರುತಿಸಿದ್ದಾರೆ.

ಸ್ಪ್ಯಾನರ ಕ್ರಾಬ್ ವೈಜ್ಞಾನಿಕ ಹೆಸರು ರನಿನಾ ರನಿನಾ ಎಂಬುದಾಗಿದ್ದು, ಕರ್ನಾಟಕದ ಕಡಲತೀರಕ್ಕೆ ಇದು ಅಪರೂಪದ ಏಡಿಯಾಗಿದೆ. ಕಪ್ಪೆ ಆಕೃತಿ ಹೊಂದಿರುವ ಈ ಏಡಿ, ಆಫ್ರಿಕಾ ಮತ್ತು ಹವಾಯಿ ದ್ವೀಪ, ಅಲ್ಲದೆ ಗ್ರೇಟ್ ಬ್ಯಾರಿಯರ್ ರೀಫ್‌ಗಳಲ್ಲಿ ವಿಪುಲವಾಗಿ ಸಿಗುತ್ತವೆ.

ಸಮುದ್ರದ ಮರಳು ಇರುವ ತಳದಲ್ಲಿ 100ಮೀಟರ್ ಆಳದವರೆಗೆ ಈ ಏಡಿ ಜೀವಿಸುತ್ತವೆ. ಏಳರಿಂದ ಒಂಬತ್ತು ವರ್ಷಗಳವರೆಗೆ ಜೀವಿಸುವ ಈ ಏಡಿ, ಸಾಮಾನ್ಯವಾಗಿ 400-900 ಗ್ರಾಂ ತೂಕ ಹೊಂದಿರುತ್ತವೆ. ಶೆಟ್ಲಿ, ಕಪ್ಪೆಚಿಪ್ಪು ಮುಂತಾದ ಮೀನುಗಳನ್ನು ತಿಂದು ಇವು ಬದುಕುತ್ತವೆ. ಈ ಏಡಿಗೆ ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಇವು ಸಹಜವಾಗಿ ಸಿಗಡಿ ಟ್ರಾಲಿಂಗ್ ಮೀನುಗಾರಿಕೆಯ ಸಮಯದಲ್ಲಿ ರಾತ್ರಿ ವೇಳೆ ಕಂಡುಬರುತ್ತವೆ. 2006ರಲ್ಲಿ ಪಂಬನ್ ಕಡಲತೀರದಲ್ಲಿ ದೊರಕಿದ ಮಾಹಿತಿ ಉಲ್ಲೇಖವಿದೆ ಎಂದು ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ನೀಲಿ ಮತ್ತು ಹಳದಿ ಗೊಬ್ಬರೆ ಮೀನಿನ ವೈಜ್ಞಾನವಿಕ ಹೆಸರು ಎಪೆನೆಫೆಲಸ್ ಪ್ಲಾವೊಸಿರುಲಸ್. ಹವಳ ಬಂಡೆಗಳಲ್ಲಿ ವಾಸವಾಗಿರುವ ಈ ಮೀನು, ಅರಬೀ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ 10 ಮೀಟರ್‌ನಿಂದ 150 ಮೀಟರ್ ಆಳದಲ್ಲಿ ಕಂಡುಬರುತ್ತವೆ. ಸುಮಾರು ಒಂದು ಮೀಟರ್ ಬೆಳೆಯ ಬಲ್ಲ ಈ ಮೀನು, 10ರಿಂದ 15 ಕೆ.ಜಿ. ತೂಕ ಇರುತ್ತದೆ.

ಈ ಮೀನುಗಳ ರೆಕ್ಕೆ ಮತ್ತು ಬಾಲ ಹಳದಿ ಬಣ್ಣ ಹೊಂದಿದ್ದು, ಬಾಲ್ಯದಲ್ಲಿ ಇವುಗಳು ನೀಲಿ ಬಣ್ಣದ್ದಾಗಿರುತ್ತದೆ. ಸಣ್ಣ ಮೀನು, ಏಡಿ, ಸಿಗಡಿ, ಬೊಂಡಾಸ, ಆಕ್ಟೋಪಸ್ ಇವುಗಳ ಆಹಾರವಾಗಿದೆ. ತಿನ್ನಲು ರುಚಿಕರ ಮತ್ತು ಬಹಳ ಬೇಡಿಕೆಯುಳ್ಳ ಮೀನು ಇದಾಗಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಹಳದಿ ಬಾಲದ ಗೊಬ್ಬರೆ ಮೀನಿನ ವೈಜ್ಞಾನಿಕ ಹೆಸರು ವೆರಿಯೋಲಾ ಲೌಟಿ. ಹವಳ ಬಂಡೆಗಳ ಕಲ್ಲುಗಳಲ್ಲಿ ವಾಸ ಮಾಡುವ ಈ ಮೀನು, ಹಿಂದು ಮಹಾಸಾಗರ, ಅರಬೀ ಸಮುದ್ರ, ಕೆಂಪು ಸಮುದ್ರದಲ್ಲಿ 15 ಮೀಟರ್‌ನಿಂದ 300ಮೀಟರ್ ಆಳದಲ್ಲಿ ಕಂಡುಬರುತ್ತದೆ. ಅಲ್ಲದೆ ಪೆಸಿಫಿಕ್ ಸಾಗರದ ಹವಳ ಬಂಡೆಯಲ್ಲೂ ಇದು ದೊರೆಯುತ್ತವೆ.

ಮೀನು, ಏಡಿ, ಆಕ್ಟೋಪಸ್, ಸಿಗಡಿ ಇವುಗಳ ಆಹಾರವಾಗಿದೆ. ಗರಿಷ್ಠ 12ಕೆ.ಜಿ. ತೂಕ ಮತ್ತು 80 ಸೆ.ಮೀ. ಉದ್ದ ಬೆಳೆಯುವ ಈ ಮೀನಿನ ಮಾಂಸ ಅತ್ಯಂತ ರುಚಿಕರವಾಗಿರುವುದರಿಂದ ತಿನ್ನಲು ಯೋಗ್ಯವಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News