ಭಾರತೀಯ ಕೋಸ್ಟ್ ಗಾರ್ಡ್‌ನ ಇಂಟರ್ ಸೆಪ್ಟರ್ ಬೋಟ್ ಸಿ-448ಗೆ ಚಾಲನೆ

Update: 2020-01-29 08:11 GMT

ಮಂಗಳೂರು, ಜ.29: ಎನ್‌ಎಂಪಿಟಿ ಸಮುದ್ರ ತಟದಲ್ಲಿ ಇಂದು ಭಾರತೀಯ ಕೋಸ್ಟ್ ಗಾರ್ಡ್ ನ ಇಂಟರ್ ಸೆಪ್ಟರ್ ಬೋಟ್ ಸಿ-448ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕದ 320 ಕಿ.ಮೀ. ಉದ್ದದ ಕರಾವಳಿ ತೀರದ ಭದ್ರತೆ ಹಾಗೂ ರಕ್ಷಣಾ ಕಾರ್ಯದಲ್ಲಿ ಈ ನೂತನ ಇಂಟರ್ ಸೆಪ್ಟರ್ ನೆರವಾಗಲಿದೆ ಎಂದರು.

ಕೆಐಎಡಿಬಿಯಿಂದ ಕೋಸ್ಟ್‌ಗಾರ್ಡ್ ಅಕಾಡಮಿ ನಿರ್ಮಾಣಕ್ಕೆ ಕೆಂಜಾರುವಿನಲ್ಲಿ 160 ಎಕರೆ ಜಾಗ ಒದಗಿಸಲಾಗಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಎಲ್ ಆ್ಯಂಡ್ ಟಿ ಶಿಪ್‌ಯಾರ್ಡ್‌ನಿಂದ ಈ ನೌಕೆಯನ್ನು ನಿರ್ಮಿಸಲಾಗಿದ್ದು 2019ರ ನವೆಂಬರ್‌ನಲ್ಲಿ ಪ್ರಾಯೋಗಿಕ ಚಾಲನೆಗಾಗಿ ನೀಡಲಾಗಿದೆ. ಅತ್ಯಾಧುನಿಕ ಸೌಲಭ್ಯ ಗಳನ್ನು ಹೊಂದಿರುವ ಈ ಬೋಟ್ ಗಸ್ತು ಕಾರ್ಯದ ಜತೆ ಪತ್ತೆ ಹಾಗೂ ರಕ್ಷಣಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ ಎಂದು ಎಲ್ ಆ್ಯಂಡ್ ಟಿ ಇದರ ಸೀನಿಯರ್ ಜನರಲ್ ಮ್ಯಾನೇಜರ್ ನವನೀತ್ ಆರ್. ಕೃಷ್ಣನ್ ಮಾಹಿತಿ ನೀಡಿದರು.

ಈ ಇಂಟರ್ ಸೆಪ್ಟರ್ ಬೋಟ್ 27.80 ಮೀಟರ್ ಉದ್ದವಿದ್ದು, 106 ಟನ್ ತೂಕ ಹೊಂದದಿದೆ. ಈ ವಾಟರ್ ಜೆಟ್ 45 ನಾಟ್ ಗರಿಷ್ಠ ವೇಗದಲ್ಲಿ 500 ನಾಟಿಕಲ್ ದೂರ ಕ್ರಮಿಸಬಲ್ಲದು ಎಂದವರು ವಿವರಿಸಿದರು. ಈ ಸಂದರ್ಭ ಕೋಸ್ಟ್ ಗಾರ್ಡ್‌ನ ಪಶ್ಚಿಮ ವಲಯ ಕಮಾಂಡರ್ ಆನಂದ್ ಪ್ರಕಾಶ್ ಬಡೋಲ, ಜಿಲ್ಲಾ ಕಮಾಂಡರ್ ಎಸ್.ಎಸ್.ದಸಿಲ, ಎನ್‌ಎಂಪಿಟಿ ಅಧ್ಯಕ್ಷ ಎ.ವಿ.ರಮಣ್, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಸಹಾಯಕ ಕಮಾಂಡರ್ ಅಪೂರ್ವಾ ಶರ್ಮ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೆಲ್ವಮಣಿ, ಎಸಿ ಮದನ್ ಮೋಹನ್, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News