ಸಾಹಿತ್ಯದಲ್ಲಿ ವಾಸ್ತವ, ಆದರ್ಶ ಜೊತೆಯಾಗಿ ಸಾಗಬೇಕಿದೆ: ಪ್ರೊ.ಅಭಯ ಕುಮಾರ್

Update: 2020-01-29 07:25 GMT

ಮಂಗಳೂರು, ಜ.29: ಸಾಹಿತ್ಯದಲ್ಲಿ ವಾಸ್ತವ ಮತ್ತು ಆದರ್ಶ ಎರಡು ಜೊತೆಯಾಗಿ ಸಾಗಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಅಭಯ ಕುಮಾರ್ ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಕಸಾಪ ವತಿಯಿಂದ ಸಂತ ಆ್ಯಗ್ನೆಸ್ ಕಾಲೇಜು ಸಹಯೋಗದಲ್ಲಿ ನಗರದ ಸಂತ ಆ್ಯಗ್ನೆಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇವಲ ಆದರ್ಶ ಅಥವಾ ಕೇವಲ ವಾಸ್ತವವನ್ನು ಸಾಹಿತ್ಯದ ಮೂಲಕ ದಾಖಲಿಸುವುದೇ ಸಾಹಿತ್ಯದ ಕೆಲಸವಾಗಬಾರದು. ಎರಡೂ ಜೊತೆಯಾಗಿ ಸಾಹಿತ್ಯದಲ್ಲಿ ದಾಖಲಾಗಬೇಕಾಗಿದೆ. ಸಮಕಾಲೀನ ಸಮಾಜಕ್ಕೆ ಮುಖಾಮುಖಿಯಾದಾಗ ಉತ್ತಮ ಕೃತಿ ಮೂಡಿಬರಲು ಸಾಧ್ಯ ಎಂದರು.

ಕರಾವಳಿ ಬಹುಧರ್ಮ, ಬಹುಜಾತಿ ಬಹು ಸಂಸ್ಕೃತಿಯ ಜನರು ಬದುಕಿದವರು.ಇಲ್ಲಿನ ಕಡಲು, ಕಾಡು ನಮ್ಮ ಸಾಹಿತಿಗಳನ್ನು ಪ್ರಭಾವಿಸಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಭಾವ ಇಲ್ಲಿನ ಸಾಹಿತಿಗಳಲ್ಲಿ ಕಡಿಮೆಯಾಗುತ್ತಿದೆ. ಡಾ.ಶಿವರಾಮ ಕಾರಂತರ ಕೃತಿಗಳಲ್ಲಿ ಕರಾವಳಿಯ ಸಮೃದ್ಧವಾದ ಸಮಕಾಲೀನ ಚಿತ್ರಣ ದೊರೆಯುತ್ತದೆ. ಇದು ಕಾರಂತರಿಗಿದ್ದ ಸೂಕ್ಷ್ಮದೃಷ್ಟಿಕೋನದಿಂದ ಸಾಧ್ಯವಾಗಿದೆ ಎಂದು ಡಾ.ಅಭಯ ಕುಮಾರ್ ತಿಳಿಸಿದ್ದಾರೆ.

ಆಶಯ ಭಾಷಣ ಮಾಡಿದ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕರಾವಳಿಯ ಕನ್ನಡ ಪರಂಪರೆಯೊಂದಿಗೆ, ಎಲ್ಲ ಚಿಂತನೆಯೊಂದಿಗೆ ಕನ್ನಡಿಗರ ಬದುಕು ಬೆಳಗಬೇಕಾಗಿದೆ ಎಂದರು.

ಹಿರಿಯ ಸಾಹಿತಿ, ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಿದರು. ಮನಪಾ ಸದಸ್ಯ ನವೀನ್ ಡಿಸೋಜ ಧ್ವಜಾರೋಹಣ ನೆರವೇರಿಸಿದರು. ಸಂತ ಆ್ಯಗ್ನ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಜೆಸ್ವೀನಾ ಎ.ಸಿ. ರಾಷ್ಟ್ರ ಧ್ವಜಾರೋಹಣಗೈದರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಚಿತ್ರಾಪುರ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News