ಉಡುಪಿ: ಎಂಡೋ ಸಂತ್ರಸ್ತರ, ಅಂಗವಿಕಲರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ

Update: 2020-01-29 08:12 GMT

ಉಡುಪಿ, ಜ.29: ಎಂಡೋಸಲ್ಫಾನ್ ಪೀಡಿತರ ಹಾಗೂ ಇತರ ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ ಕೋಣಿ ಮಾತನಾಡಿ, ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರ ಹಾಗೂ ವೈದ್ಯಕೀಯ ಆರೈಕೆಯ ಸೌಲಭ್ಯಕ್ಕಾಗಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಬೈಂದೂರಿನ ನಾಡಾ ಗ್ರಾಪಂ ವ್ಯಾಪ್ತಿಯ ಸೇನಾಪುರದಲ್ಲಿ ಸರಕಾರದ ವತಿಯಿಂದ ಐದು ಎಕರೆ ಜಾಗ ಕಾಯ್ದಿರಿಸಲಾಗಿತ್ತು. ಆದರೆ ಹಲವು ವರ್ಷ ಕಳೆದರೂ ಈವರೆಗೆ ಕೇಂದ್ರದ ಕಟ್ಟಡ ಕಾಮಗಾರಿಗೆ ಸರಕಾರ ಅನುದಾನವನ್ನು ನೀಡಿಲ್ಲ. ಆದುದರಿಂದ ಜಿಲ್ಲಾ ಎಂಡೋಸಲ್ಫಾನ್ ಸಮಿತಿಯ ನಿರ್ಣಯದಂತೆ ಶೀಘ್ರವೇ ಕೇಂದ್ರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಎಂಡೋಸಲ್ಫಾನ್ ಪೀಡಿತರಿಗೆ ನೀಡುವ ಮಾಸಾಶಾನವನ್ನು ಕ್ರಮವಾಗಿ 1500 ರೂ.ನಿಂದ 3000 ರೂ.ಗೆ, 3000 ರೂ.ನಿಂದ 6000 ರೂ.ಗೆ ಹೆಚ್ಚಿಸಬೇಕು. ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ಸರಿಯಾದ ಸಮಯ ದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ವಉದ್ಯೋಗಕ್ಕಾಗಿ ನೀಡುತ್ತಿರುವ ಆಧಾರ್ ಗೂಡಂಗಡಿ ಮೊತ್ತವನ್ನು ಎರಡು ಲಕ್ಷ ರೂ.ಗೆ ಹೆಚ್ಚಿಸಬೇಕು. ವಿಕಲಚೇತನರಿಗೆ ಎಲ್ಲ ಸರಕಾರಿ ಕಚೇರಿಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ದೇವಸ್ಥಾನಗಳಲ್ಲಿ ವಾಹನ ನಿಲುಗಡೆ ಮತ್ತು ಶೌಚಾಲಯವನ್ನು ಉಚಿತವಾಗಿ ಒದಗಿಸಲು ಗುತ್ತಿಗೆ ಆದೇಶದಲ್ಲಿಯೇ ಸೇರಿಸಬೇಕು. ತೀವ್ರತರದ ಬುದ್ಧಿಮಾಂದ್ಯರು ಮತ್ತು ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳುವ ಸಹಾಯಕರಿಗೆ ಮಾನಸಿಕ ಕನಿಷ್ಠ 3000 ರೂ. ನೀಡಬೇಕು ಮತ್ತು ಈ ಹಿಂದಿನಂತೆ ವಿಮಾನ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಸಹಕಾರ್ಯದರ್ಶಿ ನಾರಾಯಣ ಶೇರುಗಾರ, ಕೃಷ್ಣ ನಾಯ್ಕಾ ಬ್ರಹ್ಮಾವರ, ಖಜಾಂಚಿ ಬಾಬು ದೇವಾಡಿಗ, ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನರ ವಿಆರ್‌ಡಬ್ಲೂ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷೆ ಮಂಜುಳಾ ಸುಭಾಶ್, ಕಾರ್ಯದರ್ಶಿ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 ಅಂಗವಿಕಲರ ಬಾಕಿ ಮಾಶಾಸನ ಬಿಡುಗಡೆಗೆ ಒತ್ತಾಯ
ಅಂಗವಿಕಲರ ಬಾಕಿ ಮಾಶಾಸನವನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮಾಶಾಸನವನ್ನು ಪ್ರತಿ ತಿಂಗಳ 15ನೆ ತಾರೀಕಿನೊಳಗೆ ಫಲಾನುಭವಿಗಳ ಖಾತೆಗೆ ಜಮೆಗೊಳಿಸಬೇಕು. ಅಂಗವಿಕಲರ ಮಾಸಿಕ ಪೋಷಣ ಭತ್ತೆಯನ್ನು 600ರೂ.ನಿಂದ 3000ರೂ.ಗೆ ಮತ್ತು 1400ರೂ.ನಿಂದ 5000ರೂ.ಗೆ ಹೆಚ್ಚಿಸಬೇಕು. ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರಿಗೆ ಶೇ.5ರ ಅನುದಾನದಲ್ಲಿ ಗ್ರಾಪಂಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವೆಂಕಟೇಶ್ ಕೋಣಿ ಒತ್ತಾಯಿಸಿದರು.
ಸರಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ಕಡ್ಡಾಯವಾಗಿ ನಿರ್ವಹಿಸಲು ನಿರ್ದೇಶನ ನೀಡಬೇಕು. ಅಂಗವಿಕಲರಿಗೆ ನೀಡುವ ಸರಕಾರಿ ಬಸ್ ಪಾಸಿನ ಪ್ರಯಾಣ ಮಿ ಯನ್ನು ಹೆಚ್ಚಿಸಬೇಕು. ಸ್ಥಳೀಯ ಶಾಸಕರ ಅನುದಾನದ ನಿಧಿಯಿಂದ ವಿಕಲಚೇತನರಿಗೆ ಮೀಸಲಿರಿಸಿರುವ ಅನುದಾನವನ್ನು ಆಯಾ ವರ್ಷದಲ್ಲಿ ಖರ್ಚು ಮಾಡುವಂತೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News