ದ.ಕ. ಕೋಮುದಳ್ಳುರಿಯ ಜಿಲ್ಲೆಯಾಗುವುದು ಬೇಡ: ಡಾ.ಇಂದಿರಾ ಹೆಗ್ಗಡೆ

Update: 2020-01-29 11:45 GMT

ಮಂಗಳೂರು, ಜ.29: ದ.ಕ. ಕೋಮುದಳ್ಳುರಿಯ ಜಿಲ್ಲೆ ಯಾಗುವುದು ಬೇಡ. ಇದು ಬುದ್ಧಿವಂತರ ಜಿಲ್ಲೆಯಾಗಿಯೇ ಉಳಿಯಲಿ ಎಂದು ಸಾಹಿತಿ, ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಹೇಳಿದ್ದಾರೆ.

ಅವರು ದ.ಕ. ಕನ್ನಡ ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಕಸಾಪ ವತಿಯಿಂದ ನಗರದ ಸಂತ ಆ್ಯಗ್ನೆಸ್ ಕಾಲೇಜಿನ ಲ್ಲಿಂದು ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನಮ್ಮ ಜಿಲ್ಲೆಗೆ ಅಪಮಾನವಾಗುವ ರೀತಿಯ ಹೆಸರು ಬರಬಾರದು. ಕುವೆಂಪು ಅಂದಂತೆ ‘‘ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜಮತಕೆ...’’ ಎಂದು ನಾವೆಲ್ಲಾ ಒಂದೇ ಮತಕ್ಕೆ ಸೇರಿದವರೆಂಬ ಭಾವನೆಯನ್ನು ಹೊಂದಬೇಕಾಗಿದೆ. ನಾವು ಜೀವ ಪರವಾಗಿರಬೇಕು, ಜೀವ ವಿರೋಧಿಗಳಾಗಬಾರದು ಎಂದು ಇಂದಿರಾ ಹೆಗ್ಗಡೆ ನುಡಿದರು.

ನಾವು ಮತ್ತೆ ಪೂರ್ವದ ಮಾನವ ಧರ್ಮವನ್ನು ಅಪ್ಪಿಕೊಳ್ಳಬೇಕಾಗಿದೆ. ಈ ನೆಲದ ಸಂಪತ್ತನ್ನು, ಪರಿಸರವನ್ನು ಉಳಿಸಿಕೊಳ್ಳುವ ಧರ್ಮ ನಮ್ಮದಾಗಬೇಕಾಗಿದೆ ಎಂದವರು ಹೇಳಿದರು.

ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣದಿಂದ ಅದೊಂದು ಉದ್ಯಮವಾಗಿದೆ. ಕನ್ನಡ ಕಲಿಸದೆ ಇರುವುದು ಇಂದು ಹೆಗ್ಗಳಿಕೆಯಾಗಿದೆ. ಬದ್ಧತೆಯಿಲ್ಲದ ಪ್ರಭುತ್ವದಿಂದ ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಮೂಲೆಗುಂಪು ಮಾಡಲಾಗಿದೆ. ಕನ್ನಡ ಶಾಲೆ ಅಲ್ಲಲ್ಲಿ ಉಳಿದಿರುವುದು ಇಲ್ಲಿಗೆ ವಲಸೆ ಬಂದ ಕಾರ್ಮಿಕರಿಂದ ಎಂದು ಡಾ.ಇಂದಿರಾ ಹೆಗ್ಗಡೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News