ಹವ್ಯಾಸಿ ಬಳಗ ಕದ್ರಿಯ ಸಾಧನೆ ಅನನ್ಯ: ಅಣ್ಣಿ ಶೆಟ್ಟಿ ಮುಂಬೈ

Update: 2020-01-29 12:38 GMT

ಮಂಗಳೂರು, ಜ.29: ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಯಕ್ಷಗಾನ ಪರಂಪರೆಯ ಬಗ್ಗೆ ನೈಜ ಕಾಳಜಿ ಇರಿಸಿ ಕಲಾಪ್ರದರ್ಶನ ನೀಡುತ್ತಾ, ಅದ್ವಿತೀಯ ಸನ್ಮಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದ ಮಂಗಳೂರಿನ ಹವ್ಯಾಸಿ ಬಳಗ ಕದ್ರಿಯ ಸಾಧನೆ ಅನನ್ಯ ಎಂದು ಮುಂಬೈ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ, ಉದ್ಯಮಿ ಅಣ್ಣಿ ಸಿ.ಶೆಟ್ಟಿ ಮುಂಬೈ ಹೇಳಿದ್ದಾರೆ.

ಮಂಗಳೂರು ಪುರಭವನದಲ್ಲಿ ನಡೆದ ಹವ್ಯಾಸಿ ಬಳಗ ಕದ್ರಿ ಮಂಗಳೂರು ಇದರ ರಜತ ವರ್ಧಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಾರ್ಪೊರೇಟರ್‌ಗಳಾದ ಶಕಿಲಾ ಕಾವ, ಮನೋಹರ ಶೆಟ್ಟಿ, ಕಿರಣ್ ಕುಮಾರ್ ಕೋಡಿಕಲ್, ಪ್ರಮುಖರಾದ ದಿನೇಶ್ ದೇವಾಡಿಗ ಕದ್ರಿ, ನವೀನ್ ಚಂದ್ರ ಪೂಜಾರಿ, ಪ್ರಸಾದ್ ಮಾಲೆಮಾರ್, ನಿತಿನ್ ಅತ್ತಾವರ, ರವಿಪ್ರಸನ್ನ, ವಸಂತ ಕುಮಾರ್ ಶೆಟ್ಟಿ ಅಭ್ಯಾಗತರಾಗಿದ್ದರು.

ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಹಿರಿಯ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮುಂಬೈ, ವಾಸ್ತುತಜ್ಞ ರಾಜ್‌ಕುಮಾರ್ ಕುಲಶೇಖರ ಸಹಿತ ಕಲಾ ಸಾಧಕರಿಗೆ 25 ಗೌರವ ಪ್ರಶಸ್ತಿ ಹಾಗೂ 25 ಗೌರವ ಅಭಿನಂದನೆಗಳು ನಡೆದವು. ಯಕ್ಷ ಸಹೋದರ ಸನ್ಮಾನ, ಯಕ್ಷದಂಪತಿ ಸನ್ಮಾನ ವಿಶಿಷ್ಟವಾಗಿ ನಡೆಯಿತು. 25 ಕಲಾವಿದರ ಸಂಸ್ಮರಣೆ ನೆರವೇರಿತು.

ಬಳಗದ ಸಂಚಾಲಕ ಶರತ್ ಕುಮಾರ್ ಕದ್ರಿ ಸ್ವಾಗತಿಸಿ, ವಂದಿಸಿದರು.

ವಾಗ್ಮಿ ಸರ್ಪಂಗಳ ಈಶ್ವರ್ ಭಟ್ ಬಳಗದ ಸಾಧನೆಯ ಪ್ರಸ್ತಾವನೆಯೊಂದಿಗೆ ಸಂಸ್ಮರಣ ಭಾಷಣ ಮಾಡಿದರು. ಪತ್ರಕರ್ತ ವಿದ್ಯಾಧರ ಶೆಟ್ಟಿ, ಉಪನ್ಯಾಸಕ ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಹಿರಿಯ ವೃತ್ತಿ ಕಲಾವಿದರಿಂದ ಜಲಂಧರ, ಹಿರಣ್ಯಕಶ್ಯಪ, ಕಂಸ, ಕೌರವ ಆಖ್ಯಾನಗಳ ರಂಗ ವೈಭವ ಹಾಗೂ ಮೈರಾವಣ ಕಾಳಗ ಯಕ್ಷಗಾನ ಪ್ರದರ್ಶನ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News