ಉಡುಪಿ: ಅಂಚೆ ಚೀಟಿ- ನಾಣ್ಯ ಸಂಗ್ರಹಣೆ, ಕಾಯ್ದಿರಿಸುವಿಕೆ ಕುರಿತು ಕಾರ್ಯಾಗಾರ

Update: 2020-01-29 13:36 GMT

ಉಡುಪಿ, ಜ.29: ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅಂಚೆ ಚೀಟಿಗಳು ನಮ್ಮ ಸಂಸ್ಕ್ರತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪರಿಚಯಿಸುವುದರೊಂದಿಗೆ ನಮ್ಮ ನಾಡಿನ ವಿಶೇಷತೆಗಳನ್ನು ಜಗತ್ತಿಗೇ ತಿಳಿಸುತ್ತದೆ. ಇದರ ಅಗಾಧತೆ ವಿಶಿಷ್ಟವಾದದು ಎಂದು ಅದಮಾರು ಪೂರ್ಣಪ್ರಜ್ಞಾ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಹಾಗೂ ನ್ಯಾಯಾದಿ ಪ್ರದೀಪ್ ಕುಮಾರ್ ಹೇಳಿದ್ದಾರೆ.

ಉಡುಪಿ ಪೂರ್ಣ ಪ್ರಜ್ಞಾ ಕಾಲೇಜು ಹಾಗೂ ಸ್ನಾತಕೋತ್ತರ ಪದವಿ ಸಂಸ್ಥೆ, ಇಂಟರನಲ್ ಕ್ವಾಲಿಟಿ ಅಶ್ಶೂರೆನ್ಸ್ ಸೆಲ್, ಕಾಲೇಜಿನ ಇತಿಹಾಸ ವಿಭಾಗ ಹಾಗೂ ಉಡುಪಿ ಅಂಚೆ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಮಿನಿ ಅಡಿಟೋರಿಯಮ್ನಲ್ಲಿ ಇತ್ತೀಚೆಗೆ ಆಯೋಜಿಸಲಾದ ಅಂಚೆ ಚೀಟಿ ಹಾಗೂ ನಾಣ್ಯಗಳ ಸಂಗ್ರಹಣೆ ಮತ್ತು ಕಾಯ್ದಿರಿಸುವಿಕೆಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಂಚೆಚೀಟಿ ಸಂಗ್ರಹಣಾ ಹವ್ಯಾಸವನ್ನು ಆಸಕ್ತಿಯಿಂದ ಬೆಳೆಸಿಕೊಂಡು ಅದನ್ನು ತಮ್ಮ ಓದಿನೊಂದಿಗೆ ಸಮೀಕರಿಸಿದಾಗ ಸಿಗುವ ಅಗಾಧ ಜ್ಞಾನದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸುಲಭ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ಮಾತ ನಾಡಿ, ಇಂತಹ ಹವ್ಯಾಸಗಳು ಮಕ್ಕಳಿಗೆ ವೈಜ್ಞಾನಿಕತೆ, ಸಂತೋಷ, ತಾಳ್ಮೆ, ನಿರಂತರತೆ ನೀಡುತ್ತದೆ. ಈ ವಿಷಯಗಳ ಬಗ್ಗೆ ವಿಶೇಷ ಮಾಹಿತಿ ನೀಡುವುದರಿಂದ ವಿದ್ಯಾರ್ಥಿಗಳು ಒಂದಲ್ಲ ಒಂದು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಸುತ್ತದೆ ಎಂದರು.

ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್, ಭಾರತೀಯ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಂಚೆ ಚೀಟಿ ಸಂಗ್ರಹಾಕರಾದ ಅಮ್ಮುಂಜೆ ನಾಗೇಂದ್ರ ನಾಯಕ್ ಹಾಗೂ ವಿದ್ಯಾ ಕಿಶೋರ್ ಬಾಗಲೋಡಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾರ್ಯಕ್ರಮ ಸಂಯೋಜಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಚಂದ್ರ ಕಾಂತ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಚೆ ಇಲಾಖಾ ಸಿಬ್ಬಂದಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News