ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ

Update: 2020-01-29 14:19 GMT

ಮಂಗಳೂರು, ಜ.29: ದ.ಕ.ಜಿಲ್ಲಾ ಮತ್ತು ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಸಂತ ಆಗ್ನೆಸ್ ಕಾಲೇಜಿನ ಕಡೆಂಗೋಡ್ಲು ಶಂಕರಭಟ್ಟ ವೇದಿಕೆಯಲ್ಲಿ ಬುಧವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಡಾ. ಜಯಂತ ಎಚ್.(ಶಿಕ್ಷಣ), ಮಮ್ತಾಝ್ ಬೇಗಂ(ಸಾಹಿತ್ಯ), ರವಿ ಅಡಿಗ ಕದ್ರಿ(ವೇದ ವಿದ್ವಾಂಸರು), ರೆ.ಸಿ. ಮರಿಯಾ ಜ್ಯೋತಿ(ವಿಶೇಷ ಮಕ್ಕಳ ಸೇವೆ), ತಾರಾನಾಥ ಬೋಳಾರ್(ನಿವೃತ್ತ ಯೋಧ), ಮಟ್ಟಾರು ವಿಟ್ಠಲ್ ಕಿಣಿ(ಸಾಹಿತ್ಯ ಸೇವೆ), ಪೈಲ್ವಾನ್ ಕೊಗ್ಗಪ್ಪ (ಪಾರಂಪರಿಕ ಕ್ರೀಡಾ ಕಲೆ), ಶ್ರೀಮಾ ಪ್ರಿಯದರ್ಶಿನಿ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಭಾಷಣ ಮಾಡಿದ ನಂತೂರು ಪಾದುವಾ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಆಲ್ವಿನ್ ಸೆರಾವೊ ಇಂದು ಜಗತ್ತಿನಾದ್ಯಂತ ಭಾಷಾ ಸಾಮ್ರಾಜ್ಯಶಾಹಿತ್ವ ಇದೆ. ಇಂಗ್ಲಿಷ್‌ನಂತಹ ಭಾಷೆಗಳಿಂದ ಪ್ರಾದೇಶಿಕ ಭಾಷೆಗಳು ನಶಿಸುವ ಆತಂಕವಿದೆ. ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ. ಪ್ರಸ್ತುತ ತ್ರಿಭಾಷಾ ಸೂತ್ರದಿಂದಾಗಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ಮೂರು ಭಾಷೆಗಳನ್ನು ಮಾತ್ರ ಕಲಿಯಲು ಅವಕಾಶವಿದೆ. ಮೂರಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯಲು ಅವಕಾಶ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷೆ ಡಾ. ಇಂದಿರಾ ಹೆಗ್ಗಡೆ ಮಾತನಾಡಿ ‘ಬರಹಗಾರರ ಕತ್ತು ಹಿಸುಕುವ ಕಾಲದಲ್ಲಿ ನಾವಿದ್ದೇವೆ. ಪ್ರಭುತ್ವವು ಬರಹಗಾರನ ಕತ್ತು ಹಿಸುಕಿದರೆ ಇತಿಹಾಸವನ್ನು ದಾಖಲಿಸುವವರೇ ಇರುವುದಿಲ್ಲ. ಸಾಹಿತಿಗಳಿಂದಲೂ ತಪ್ಪುಗಳಾಗುತ್ತವೆ. ಅದನ್ನು ಒಪ್ಪಿಕೊಳ್ಳುವ ಮನೋಭಾವವೂ ಬೇಕು. ಪ್ರಭುತ್ವ ಬರಹಗಾರರನ್ನು ಅವರ ಪಾಡಿಗೆ ಬಿಟ್ಟು ಬಿಡಬೇಕು’ ಎಂದರು.

ಕಸಾಪ ಮಂಗಳೂರು ತಾಲುಕು ಗೌರವ ಕೋಶಾಧ್ಯಕ್ಷ ಪಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಕಾರ್ಯಕಾರಿ ಸದಸ್ಯ ರಘು ಇಡ್ಕಿದು ವಂದಿಸಿದರು. ಪ್ರಾಧ್ಯಾಪಕ ಡಾ. ಪ್ರಕಾಶಚಂದ್ರ ಶಿಶಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News