ನಮ್ಮನ್ನು ತಕ್ಷಣ ರಕ್ಷಿಸಿ: ವುಹಾನ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಮೊರೆ

Update: 2020-01-29 14:39 GMT

ವುಹಾನ್ (ಬೀಜಿಂಗ್), ಜ. 29: ಚೀನಾದ ವುಹಾನ್ ನಗರಕ್ಕೆ ಹಾಕಿರುವ ಬೀಗಮುದ್ರೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ತಮ್ಮ ವಿದ್ಯಾರ್ಥಿನಿಲಯದಲ್ಲಿ ಆಹಾರ ಮತ್ತು ನೀರಿನ ಕೊರತೆ ತಲೆದೋರಿದೆ, ಹಾಗಾಗಿ ತಮ್ಮನ್ನು ರಕ್ಷಿಸಲು ತಕ್ಷಣ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚೀನಾದ ವುಹಾನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಎಂಟು ಭಾರತೀಯ ವಿದ್ಯಾರ್ಥಿಗಳು ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮಾರಕ ಕೊರೋನವೈರಸ್ ಕಾಯಿಲೆಯ ಕೇಂದ್ರಬಿಂದುವಾಗಿರುವ ವುಹಾನ್ ನಗರವು ಹಲವು ದಿನಗಳಿಂದ ಬೀಗಮುದ್ರೆಯಲ್ಲಿದೆ.

ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿದೆ ಹಾಗೂ ಎಲ್ಲ ಸಾಧ್ಯವಿರುವ ನೆರವನ್ನು ನೀಡುವ ಭರವಸೆಯನ್ನು ನೀಡಿದೆ.

ನಗರದಲ್ಲಿ ಮಾರಕ ವೈರಸ್‌ನ ಸೋಂಕು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ವಿದ್ಯಾರ್ಥಿಗಳು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.

ವುಹಾನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳು ಅಸ್ಸಾಮ್, ದಿಲ್ಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು.

ಬೀಗಮುದ್ರೆಯ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿವೆ ಹಾಗೂ ಸಾರಿಗೆ ವ್ಯವಸ್ಥೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ತಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ವುಹಾನ್‌ನಿಂದ ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಫೋನ್‌ನಲ್ಲಿ ಮಾತನಾಡಿದ ಅಸ್ಸಾಮ್ ವಿದ್ಯಾರ್ಥಿ ಗೌರವ್‌ ನಾಥ್ ಹೇಳಿದರು.

‘‘ನಗರದಲ್ಲಿ ಕೊರೋನವೈರಸ್ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಕೋಣೆಗಳ ಒಳಗೇ ಇರುವಂತೆ ಸೂಚಿಸಲಾಗಿದೆ. ಹಾಗಾಗಿ, ನಾವು ನಮ್ಮ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಹಾಸ್ಟೆಲ್ ನಲ್ಲೇ ಬಾಕಿಯಾಗಿದ್ದೇವೆ. ಅಗತ್ಯ ವಸ್ತುಗಳನ್ನು ಖರೀದಿಸಲು ನಮಗೆ ದಿನದಲ್ಲಿ ಕೇವಲ 2 ಗಂಟೆ ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಆದರೆ, ನಗರದಲ್ಲಿ ಬೀಗಮುದ್ರೆಯಿದೆ. ಎಲ್ಲ ಅಂಗಡಿಗಳು ಮತ್ತು ಸಾರಿಗೆ ವ್ಯವಸ್ಥೆಗಳು ಮುಚ್ಚಿವೆ. ಇಲ್ಲಿ ಅಗತ್ಯ ವಸ್ತುಗಳ ಕೊರತೆಯಿದೆ ಹಾಗೂ ನಮ್ಮ ಆಹಾರ ಮತ್ತು ನೀರಿನ ಸಂಗ್ರಹ ಶೀಘ್ರದಲ್ಲೇ ಮುಗಿಯುತ್ತದೆ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News