ಕುಂದಾಪುರ ಪ್ಲೈಓವರ್ ಕಾಮಗಾರಿ ಪೂರ್ಣಗೊಳಿಸದಿದ್ದರೆ ಮಾ.31ರಿಂದ ಟೋಲ್ ಬಂದ್: ಶೋಭಾ ಕರಂದ್ಲಾಜೆ

Update: 2020-01-29 14:41 GMT

ಉಡುಪಿ, ಜ.29: ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿರುವ ಪ್ಲೈಓವರ್ ಕಾಮಗಾರಿಯನ್ನು ಈ ಹಿಂದೆ ನೀಡಿರುವ ಮಾ.31ರ ಗಡುವಿನೊಳಗೆ ಪೂರ್ಣಗೊಳಿಸದಿದ್ದರೆ ಉಡುಪಿ ಜಿಲ್ಲೆಯಲ್ಲಿ ಟೋಲ್ ಸಂಗ್ರಹಿಸಲು ಅವಕಾಶ ನೀಡುವುದಿಲ್ಲ. ಸ್ವತಃ ನಾನೇ ಟೋಲ್ ಗೇಟ್ ಎದುರು ಬಂದು ಕೂರುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆ(ದಿಶಾ) ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಈಗಾಗಲೇ ಪಂಪ್‌ವೆಲ್ ಪ್ಲೈಓವರ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಅಲ್ಲಿನ ಇಡೀ ತಂಡವನ್ನು ಕುಂದಾಪುರಕ್ಕೆ ವರ್ಗಾಯಿಸಲಾಗಿದೆ. ಈಗಾಗಲೇ ಕುಂದಾಪುರ ಪ್ಲೈಓವರ್ ಕಾಮಗಾರಿ ಕೆಲಸ ಆರಂಭಿಸಲಾಗಿದ್ದು, ಎಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಅದೇ ರೀತಿ ಮಾರ್ಚ್ ಅಂತ್ಯಕ್ಕೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೂಡ ಮುಗಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಗದೀಶ್, ಈಗಾಗಲೇ ನಿರ್ಣಯಿಸಿ ದಂತೆ ಮಾ.31ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಲ್ಲ ಎಂದರು. ಇದಕ್ಕೆ ದ್ವನಿಗೂಡಿಸಿದ ಸಂಸದೆ, ನಿಗದಿತ ಸಮಯದಲ್ಲಿ ಕಾಮಗಾರಿ ಆಗದಿದ್ದರೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಿಸಲು ಬಿಡುವುದಿಲ್ಲ. ಕಾಮಗಾರಿ ಪೂರ್ಣಗೊಳಿಸಿದ ನಂತರವೇ ಟೋಲ್ ಸಂಗ್ರಹವನ್ನು ಮುಂದುವರೆಸಬೇಕು ಎಂದರು.

ಶಿವಪುರದವರೆಗೆ ಕಾಂಕ್ರೀಟ್ ಹೆದ್ದಾರಿ: ಉಡುಪಿಯಿಂದ ಪರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ 169ಎಯ ಏಳು ಕಿ.ಮೀ. ಕಾಂಕ್ರೀಟೀಕರಣ ಕಾಮಗಾರಿಯಲ್ಲಿ ಒಂದು ಕಿ.ಮೀ. ಪರ್ಕಳದಲ್ಲಿ ಬಾಕಿ ಇದೆ. ಇಲ್ಲಿ ಭೂಸ್ವಾಧೀನ ನಡೆಸಲು ಗಜೆಟ್ ನೋಟಿಫೀಕೇಶನ್ ಆಗಿದೆ. ಅದೇ ರೀತಿ ಇಂದ್ರಾಳಿ ಸೇತುವೆ ನಿರ್ಮಾಣಕ್ಕೆ ರೈಲ್ವೆಯಿಂದ ಸಮಸ್ಯೆಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿ ಹೇಳಿದರು.

ಮುಂದೆ ಪರ್ಕಳದಿಂದ ಶಿವಪುರದವರೆಗೆ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರೀಟೀ ಕರಣ ಕಾಮಗಾರಿಗೆ 200ಕೋಟಿ ರೂ. ಮೊತ್ತದ ಯೋಜನೆ ಸಿದ್ಧಪಡಿಸಿ, ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ಇಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸಂಸದೆ ಸೂಚಿಸಿದರು.

ಕರಾವಳಿ ಬೈಪಾಸ್- ಮಲ್ಪೆ ರಾಷ್ಟ್ರೀಯ ಹೆದ್ದಾರಿ ದ್ವಿಪಥ ಕಾಮಗಾರಿಗೆ ಸಂಬಂಧಿಸಿ ಮಳೆಗಾಲದೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಮಳೆಗಾಲದ ನಂತರ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಈಗಾಗಲೇ 50ಕೋಟಿ ರೂ. ಮಂಜೂರಾಗಿದೆ ಎಂದು ಅಧಿಕಾರಿ ತಿಳಿಸಿದರು. ಬಂದರು ಹಾಗೂ ಬೀಚ್‌ಗೆ ಹೋಗುವ ಪ್ರಮುಖ ರಸ್ತೆಯಾಗಿರುವ ಈ ರಸ್ತೆ ಕಾಮಗಾರಿ ಯನ್ನು ಸಮರೋಪಾಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದೆ ಸೂಚನೆ ನೀಡಿದರು.

15 ಗ್ರಾಪಂಗಳಿಗೆ ವಿಸ್ತರಣೆ: ಕಾಡೂರು ಗ್ರಾಪಂನಲ್ಲಿ ಪೈಲಟ್ ಯೋಜನೆಯಡಿ ನಗದು ರಹಿತ ಸೇವೆ ಶೇ.100ರಷ್ಟು ಯಶಸ್ವಿಯಾಗಿದ್ದು, ಈ ಸೇವೆಯನ್ನು ಈ ವರ್ಷ ಜಿಲ್ಲೆಯ ಮತ್ತೆ 15 ಗ್ರಾಪಂಗಳಿಗೆ ವಿಸ್ತರಿಸಲಾಗಿದೆ. ಮುಂದಿನ ವರ್ಷದಿಂದ ಜಿಲ್ಲೆಯ ಎಲ್ಲಾ ಗ್ರಾಪಂಗಳು ನಗದು ರಹಿತ ಸೇವೆಯನ್ನು ನೀಡಲಿವೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸಭೆಗೆ ಮಾಹಿತಿ ನೀಡಿದರು.

ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆಯದೆ ಸ್ವಂತ ಕಟ್ಟಡ ನಿರ್ಮಿಸಲು ಸಮಸ್ಯೆಯಾಗಿದೆ. ಆದುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತು ಕತೆ ನಡೆಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಸಂಸದೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಗೆ ಪ್ರತಿ ಬಾರಿಯೂ ಸಭೆಗೆ ಗೈರು ಹಾಜರಾಗುವ ಇಲಾಖಾಧಿಕಾರಿಗಳಿಗೆ ಶೋಕಾಸ್ ನೋಟೀಸು ಜಾರಿ ಮಾಡುವಂತೆ ಅವರು ನಿರ್ದೇಶನ ನೀಡಿದರು.

ಮಾತೃ ಪೂರ್ಣಯೋಜನೆಯ ತೊಂದರೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಈ ಯೋಜನೆಯನ್ನು ಮಾರ್ಪಡಿಸಿ, ಫಲಾನುಭವಿ ಗಳಿಗೆ ನಗದು ಹಣ ಅಥವಾ ದವಸ ಧಾನ್ಯಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಂಸದೆ ಕರಂದ್ಲಾಜೆ ತಿಳಿಸಿದರು. ಈ ಯೋಜನೆಯನ್ನು ಜಿಲ್ಲೆಯಲ್ಲಿ ಶೇ.20ರಷ್ಟು ಮಾತ್ರ ಬಳಕೆ ಮಾಡುತ್ತಿದ್ದಾರೆ ಎಂದು ಇಲಾಖಾಧಿಕಾರಿ ಶೇಷಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ನರ್ಮ್ ಬಸ್‌ಗಳ ಓಡಾಟದ ಮಾರ್ಗ ಮತ್ತು ಸಮಯದ ವೇಳಾಪಟ್ಟಿಯನ್ನು ಪುನರ್ ರೂಪಿಸಬೇಕು. ಅಗತ್ಯ ಇರುವ ಕಡೆಗಳಿಗೆ ಬಸ್ ಗಳ ಸಂಚಾರಕ್ಕೆ ಪರವಾನಿಗೆ ನೀಡಬೇಕು. ಈ ಸಂಬಂಧ ಆರ್.ಟಿ.ಓ ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದು ಸಂಸದೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಹಾಜರಿದ್ದರು.

ಬಿ.ಆರ್.ಶೆಟ್ಟಿ ಆಸ್ಪತ್ರೆಯ ಕಾಮಗಾರಿಗೆ ಆಕ್ಷೇಪ
ಉಡುಪಿ ಕೆ.ಎಂ.ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ಬಿ.ಆರ್.ಶೆಟ್ಟಿ ಅವರ 400 ಬೆಡ್‌ಗಳ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡದಲ್ಲಿ ಮೂರು ನೆಲಮಹಡಿ ನಿರ್ಮಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಈ ವಿಚಾರದಲ್ಲಿ ನಿಮಗೆ ಸಮಸ್ಯೆಯಾಗುವುದಾದರೆ ಜನಪ್ರತಿನಿಧಿಗಳಾದ ನಮ್ಮ ಹೆಸರು ಹೇಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲಾಧಿಕಾರಿಗೆ  ಸೂಚನೆ ನೀಡಿದರು.

ಶಾಸಕ ರಘುಪತಿ ಭಟ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇವರಿಗೆ ಅನುಮತಿ ನೀಡಿದರೆ ಮುಂದೆ ಎಲ್ಲರಿಗೂ ಅನುಮತಿ ನೀಡಬೇಕಾಗುತ್ತದೆ ಎಂದರು. ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರಕಾರಿ ವೈದ್ಯರ ಯೂನಿಟ್ ಇರಿಸಬೇಕು. ವೈದ್ಯಕೀಯ ಅಧೀಕ್ಷಕರಾಗಿ ಸರಕಾರಿ ವೈದ್ಯರನ್ನು ನೇಮಿಸಬೇಕು. ಎಲ್ಲ ರೀತಿಯ ರೋಗಿಗಳಿಗೂ ಚಿಕಿತ್ಸೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದೆ ಜಿಲ್ಲಾಧಿಕಾರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News