ಶಾಸಕ ಯು.ಟಿ.ಖಾದರ್‌ಗೆ ಬೆದರಿಕೆ: ಕಾವೂರು ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು

Update: 2020-01-29 16:07 GMT

ಮಂಗಳೂರು, ಜ.29: ಶಾಸಕ ಯು.ಟಿ. ಖಾದರ್‌ಗೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬುಧವಾರ ಕಾವೂರು ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಪರವಾಗಿ ಬಿಜೆಪಿ ವತಿಯಿಂದ ಜ.27ರಂದು ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸೋಮವಾರ ನಡೆದ ಜನಜಾಗೃತಿ ರ್ಯಾಲಿ ಸಂದರ್ಭ ಯುವಕರ ಗುಂಪೊಂದು ಶಾಸಕ ಯು.ಟಿ.ಖಾದರ್‌ಗೆ ಜೀವ ಬೆದರಿಕೆ ಒಡ್ಡುವ ಘೋಷಣೆ ಕೂಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ದ.ಕ.ಜಿಲ್ಲಾ ಕಾಂಗ್ರೆಸ್ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿತ್ತು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಯೂ ನಡೆದಿತ್ತು. ಪೊಲೀಸ್ ಇಲಾಖೆಯ ಮೌನದ ಬಗ್ಗೆಯೂ ಪ್ರಶ್ನಿಸಲಾಗಿತ್ತು.

ಘಟನೆಯ ಬಗ್ಗೆ ಯು.ಟಿ.ಖಾದರ್ ಪ್ರತಿಕ್ರಿಯಿಸಿ, ನನ್ನ ತಲೆಯಿಂದ ಸಂತೋಷ ಆಗುವುದಾದರೆ ನೀವು ಕರೆದಲ್ಲಿಗೆ ಬರುತ್ತೇನೆ. ಅವರ ವಿರುದ್ಧ ಕೇಸ್ ಹಾಕಬಹುದು. ಆದರೆ ಅವರ ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವವರು ಯಾರು? ಘೋಷಣೆ ಕೂಗುವಾಗ ಎಚ್ಚರದಿಂದಿರಬೇಕು ಎಂದಿದ್ದರು.

ಈ ಎಲ್ಲಾ ಬೆಳವಣಿಗೆಯ ಮಧ್ಯೆ ಪೊಲೀಸ್ ಆಯುಕ್ತರ ಸೂಚನೆಯಂತೆ ಕಾವೂರು ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News