ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಹುಸಿ ಬಾಂಬ್ ಕರೆ

Update: 2020-01-29 16:43 GMT

ಮಂಗಳೂರು, ಜ.29: ಬಜ್ಪೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಸಂಜೆ ಮತ್ತೊಂದು ಹುಸಿ ಬಾಂಬ್ ಕರೆ ಬಂದಿದ್ದು, ಆ ಬಳಿಕ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರದ ಆದಿತ್ಯ ರಾವ್ ಎಂಬಾತ ಇಟ್ಟಿದ್ದ ಸ್ಫೋಟಕ ಪತ್ತೆಯಾದ ಬಳಿಕ ಆತಂಕದ ವಾತಾವರಣ ಉಂಟಾಗಿತ್ತು. ಅಲ್ಲದೆ ಹೈದರಾಬಾದ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೂ ಬಂದಿತ್ತು.

ಇದೀಗ ಸೋಮವಾರ ಸಂಜೆ ಅನಾಮಧೇಯ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದ ಎಟಿಎಸ್‌ಗೆ ಕರೆ ಮಾಡಿ, ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಕರೆಯನ್ನು ಕಡಿತಗೊಳಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿಯು ತೀವ್ರ ತಪಾಸಣೆ ಮಾಡಿದ್ದು, ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ.

ಕುಳಾಯಿಯಲ್ಲಿ ಸೋಮವಾರ ನಡೆದ ಸಿಎಎ ಪರ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರ ವಿಮಾನ ಟೇಕ್‌ಆಫ್ ಆದ ನಂತರ ಈ ಕರೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News