ಜ.30: ಬೆಂಗಳೂರಿನಲ್ಲಿ ಆದಿತ್ಯರಾವ್ ಸಮ್ಮುಖ ಸ್ಥಳ ತನಿಖೆ

Update: 2020-01-29 16:51 GMT

ಮಂಗಳೂರು, ಜ.29: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯ ರಾವ್‌ನ ಸೈಬರ್ ಅಪರಾಧದ ಬಗ್ಗೆ ಬುಧವಾರ ಮತ್ತಷ್ಟು ತನಿಖೆ ನಡೆಸಿರುವ ಪೊಲೀಸರು ಜ.30ರಂದು ಬೆಂಗಳೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇಂಟರ್‌ನೆಟ್ ಬಳಸಿ ಆದಿತ್ಯ ರಾವ್ ನಡೆಸಿದ ಕೃತ್ಯಗಳ ಬಗ್ಗೆ ಈಗಾಗಲೇ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಅಲ್ಲದೆ ಸ್ಥಳ ಮಹಜರು ನಡೆಸಲಾಗಿದೆ. ಇದೀಗ ಬುಧವಾರ ಮತ್ತೆ ಸೈಬರ್ ಅಪರಾಧ ಕುರಿತು ವಿಸ್ತೃತ ತನಿಖೆ ನಡೆಸಲಾಗಿದೆ. ಆತ ಆನ್‌ಲೈನ್ ಮೂಲಕ ನಡೆಸಿದ ಇನ್ನಷ್ಟು ವ್ಯವಹಾರ ಹಾಗೂ ಹಳೆ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಆರೋಪಿ ಆದಿತ್ಯ ರಾವ್‌ನನ್ನು ಗಮನಿಸಿರುವ ಮತ್ತು ಆತನ ಬಗ್ಗೆ ಮಾಹಿತಿ ತಿಳಿದಿರುವವರಿಂದ ಮಹತ್ವದ ಸಾಕ್ಷ್ಯ ಸಂಗ್ರಹಿಸಲಾಗಿದೆ. ಬುಧವಾರ ಎಸಿಪಿ ಬೆಳ್ಳಿಯಪ್ಪ ಅವರ ಮುಂದೆ ಠಾಣೆಗೆ ಆಗಮಿಸಿರುವ ಹಲವು ಮಂದಿ ಆದಿತ್ಯ ರಾವ್ ಚಟುವಟಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಆದಿತ್ಯ ರಾವ್ ಎಲ್ಲೆಲ್ಲಿ ಸಂಚರಿಸಿದ್ದಾನೆ ಎಂಬ ಬಗ್ಗೆ ಸಾಕ್ಷ್ಯ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಆರೋಪಿ ಆದಿತ್ಯ ರಾವ್ ಬೆಂಗಳೂರಿಗೆ ತೆರಳಿ ಪೊಲೀಸರಿಗೆ ಶರಣಾಗಿದ್ದ. ಅಲ್ಲಿಗೆ ತೆರಳಿ ಶರಣಾಗತಿವರೆಗಿನ ಎಲ್ಲ ಮಗ್ಗುಲುಗಳ ಬಗ್ಗೆ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ಮಹಜರು ನಡೆಸಲಿದ್ದಾರೆ. ಜ.30 ಮತ್ತು 31ರಂದು ಬೆಂಗಳೂರಿನಲ್ಲಿ ಮಹಜರು ನಡೆಸಿ ಅನಿವಾರ್ಯವಾದರೆ, ಚೆನ್ನೈಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.

ಫೆ.1ರಂದು ಮತ್ತೆ ಆರೋಪಿ ಆದಿತ್ಯರಾವ್‌ನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಮತ್ತೆ ತನಿಖೆಗೆ ಅವಶ್ಯವಾದರೆ, ಹೆಚ್ಚುವರಿ ದಿನಗಳ ಪೊಲೀಸ್ ಕಸ್ಟಡಿ ಕೋರಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ: ಆರೋಪಿ ಆದಿತ್ಯ ರಾವ್ ಬಾಂಬ್ ಇರಿಸಿದ ಬಳಿಕ ಬಾಂಬ್ ಪತ್ತೆಯಾಗಿ ಆತ ಬಂಧನಕ್ಕೊಳಗಾದ ಆಗುಹೋಗುಗಳ ಸಾಕ್ಷ್ಯಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಆತ ಆನ್‌ಲೈನ್‌ನಲ್ಲಿ ತರಿಸಿಕೊಂಡ ಪುಡಿ, ಸ್ಫೋಟಕ್ಕೆ ಬಳಸುವ ಕಚ್ಚಾ ಸಾಮಗ್ರಿಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಆತನ ಕರೆ ಮಾಡಿದ ಬಗ್ಗೆ ಧ್ವನಿ ಮುದ್ರಿಕೆಯನ್ನು ಕೂಡ ಕಳುಹಿಸಬೇಕಾಗುತ್ತದೆ. ಆದ್ದರಿಂದ ಈ ಎಲ್ಲ ವರದಿಗಳು ಬರಬೇಕಾದರೆ ಕೆಲವು ದಿನಗಳು ಬೇಕಾಗಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News