​ಫೆ.2: ಮಣಿಪಾಲದಲ್ಲಿ ಪಕ್ಷಿ ದಿನ

Update: 2020-01-29 17:21 GMT

ಉಡುಪಿ, ಜ.29: ಮಣಿಪಾಲದ ಆಸುಪಾಸು ಹಾಗೂ ಉಡುಪಿ ಜಿಲ್ಲೆಯ ಲ್ಲಿರುವ ಪಕ್ಷಿ ಪ್ರಬೇಧಗಳ ದಾಖಲೀಕರಣ, ಅವುಗಳ ಅಧ್ಯಯನಕ್ಕಾಗಿ ಹುಟ್ಟಿ ಕೊಂಡ ಮಣಿಪಾಲ ಬರ್ಡರ್ಸ್‌ ಕ್ಲಬ್, ಇದೇ ಫೆ.2ರಂದು ಮಣಿಪಾಲದಲ್ಲಿ ಮಣಿಪಾಲ ಬರ್ಡ್ ದಿನವನ್ನು ಆಚರಿಸಲಿದೆ ಎಂದು ಕ್ಲಬ್‌ನ ಸದಸ್ಯರಾದ ತೇಜಸ್ವಿ ಎಸ್.ಆಚಾರ್ಯ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ರವಿವಾರ ಮುಂಜಾನೆ ಮಣಿಪಾಲದಲ್ಲಿ ಒಟ್ಟುಗೂಡುವ 100ಕ್ಕೂ ಅಧಿಕ ಸದಸ್ಯರು ವಿವಿಧ ಗುಂಪುಗಳಾಗಿ ಹಕ್ಕಿಗಳ ವೀಕ್ಷಣೆಗೆ ಹಾಗೂ ಅಧ್ಯಯನಕ್ಕಾಗಿ ವಿವಿಧ ಸ್ಥಳಗಳಿಗೆ ತೆರಳಿ, ಬಂದ ಬಳಿಕ ಅಂದು ಪತ್ತೆ ಮಾಡಲಾದ ಪಕ್ಷಿಗಳ ವಿವರಗಳನ್ನು ಕಲೆ ಹಾಕುತ್ತೇವೆ. ಅವುಗಳ ದಾಖಲೀಕರಣ ಮಾಡುತ್ತೇವೆ ಎಂದರು.

ಫೆ.2ರಂದು ಮಣಿಪಾಲ ಪಕ್ಷಿ ದಿನದಂದು ಮಣಿಪಾಲ, ಉಡುಪಿ, ಮಂಗಳೂರು, ಮೈಸೂರು, ಬೆಂಗಳೂರು, ದಾವಣಗೆರೆ ಹಾಗೂ ಇತರ ಸ್ಥಳಗಳಿಂದ 150ರಿಂದ 200 ಮಂದಿ ಪಕ್ಷಿ ಪ್ರಿಯರು ಸೇರಲಿದ್ದು, ಇವರು ವಿವಿಧ ತಂಡಗಳಲ್ಲಿ ಪಕ್ಷಿ ವೀಕ್ಷಣೆಗೆ ಗುರುತಿಸಿದ ಸುಮಾರು 15 ಸ್ಥಳಗಳಿಗೆ ತೆರಳಲಿದ್ದಾರೆ ಎಂದು ವಿವರಿಸಿದರು.

ಮಣಿಪಾಲ ಆಸುಪಾಸಿನ ಮಣ್ಣಪಳ್ಳ, ಹೆರ್ಗ, ಸರಳೆಬೆಟ್ಟು, ಇಂದ್ರಾಳಿ, ಕರ್ವಾಲ್, ಎಂಡ್‌ಪಾಯಿಂಟ್‌ಗಳಲ್ಲಿ ಪಕ್ಷಿವೀಕ್ಷಣೆಗೆ ಪ್ರಶಸ್ತವಾದ ಸ್ಥಳವಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಎಲ್ಲರೂ ಮಣಿಪಾಲಕ್ಕೆ ಮರಳಲಿದ್ದು, ಅಪರಾಹ್ನ 1:00ಗಂಟೆಯವರೆಗೆ ಮಣಿಪಾಲದ ಕೆಎಂಸಿ ಫುಟ್‌ಕೋರ್ಟ್‌ನಲ್ಲಿ ಎಲ್ಲರೂ ಸೇರಿ ಪಕ್ಷಿ ವೀಕ್ಷಣೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇವೆ ಎಂದರು.

ಕ್ಲಬ್‌ನ ಸದಸ್ಯರಾದ ಆದಿತ್ಯ ಭಟ್ ಅವರು ರಚಿಸಿದ ಪಕ್ಷಿಗಳ ವರ್ಣಚಿತ್ರ ಪ್ರದರ್ಶನ, ‘ಫೆದರ್ಡ್‌ ಜ್ಯುವೆಲ್ಸ್’, ಶುಭಾ ಭಟ್ ಅವರ ಪಕ್ಷಿ ವೀಕ್ಷಣೆ ಕುರಿತ ‘ಬ್ಯಾಕ್‌ಯಾರ್ಡ್ ಬರ್ಡಿಂಗ್’ ಕುರಿತು ಸಂವಾದ ಕಾರ್ಯಕ್ರಮ, ಎಂಐಟಿ ವಿದ್ಯಾರ್ಥಿ ಅಭಿಷೇಕ್ ಮಯ್ಯ ಅವರು ವಿಶೇಷ ಅಧ್ಯಯನ ವರದಿ ಪ್ರಸ್ತುತ ಪಡಿಸುವರು ಎಂದು ತೇಜಸ್ವಿ ಆಚಾರ್ಯ ತಿಳಿಸಿದರು.

ಮಣಿಪಾಲ ಬರ್ಡರ್ಸ್‌ ಕ್ಲಬ್‌ನಲ್ಲಿ 7ವರ್ಷದಿಂದ 70ವರ್ಷದೊಳಗಿನವರು ಸದಸ್ಯರಾಗಿದ್ದು, ಪಕ್ಷಿ ವೀಕ್ಷಣೆ, ಪಕ್ಷಿ ಫೋಟೊಗ್ರಫಿಯಲ್ಲಿ ಆಸಕ್ತಿ ಇರುವ ಯಾರೂ ಸಹ ಸದಸ್ಯರಾಗಬಹುದು. ಫೆ.2ರ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದೆ ಎಂದು ಅವರು ನುಡಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಸದಸ್ಯರಾದ ಡಾ.ವೃಂದಲತ್ ಹಾಗೂ ಶಶಾಂಕ್ ಶಿವತ್ತಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News