ಹಾಸ್ಟೆಲ್‌ಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ: ದಿನಕರ ಬಾಬು

Update: 2020-01-29 17:29 GMT

ಉಡುಪಿ, ಜ.29: ಜಿಲ್ಲೆಯ ಹಲವು ಹಾಸ್ಟೆಲ್‌ಗಳಲ್ಲಿ ವಾರ್ಡನ್ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಇದರಿಂದ ಮಕ್ಕಳಿಗೆ ತೊಂದರೆಗಳಾಗುತ್ತಿವೆ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ 19ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಹೆಬ್ರಿ ಬಾಲಕರ ನಿಲಯ ಮತ್ತು ಹಿಂದುಳಿದ ವರ್ಗಗಳ ಮಹಿಳಾ ಹಾಸ್ಟೆಲ್ ಗಳಲ್ಲಿ ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಅಧ್ಯಕ್ಷರ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಹಾಸ್ಟೆಲ್‌ಗಳಲ್ಲಿ ನಿರ್ವಹಣೆ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದುತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ಪ್ರೀತಿ ಗೆಹ್ಲೋಟ್ 15 ದಿನಗಳೊಳಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಜನಾರ್ದನ ತೋನ್ಸೆ ಅರಣ್ಯ ವ್ಯಾಪ್ತಿಯಲ್ಲಿರುವ ಅಕೇಶಿಯ ಮರ ಕಟಾವಣೆ ಕುರಿತು ಮಾತನಾಡಿ, ಅಕೇಶಿಯಾ ಮರದಲ್ಲಿ ವಾಸವಾಗಿರುವ ದೊಡ್ಡ ಗಾತ್ರದ ಬಾವಲಿಗಳು ಹತ್ತಿರದ ತೋಟಗಳಿಗೆ ನುಗ್ಗಿ ಎಳನೀರನ್ನು ಕುಡಿದು ಹಾಳು ಮಾಡುತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಅಲ್ಲದೇ ಕೆರೆ ಹಾಗೂ ನದಿಗಳಲ್ಲಿರುವ ಮೀನಿನ ಸಂತತಿ ನಾಶವಾಗುತ್ತಿದ್ದು ಮೀನುಗಾರರಿಗೂ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿಯುತವಾದ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ ಎಂದರು.

ಯಾವುದಕ್ಕೂ ಉಪಯೋಗವಿಲ್ಲದ ಅಕೇಶಿಯಾ ಮರವನ್ನು ಕಟಾವು ಮಾಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿನಕರ ಬಾಬು ಕಳೆದ 18 ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತಿದ್ದು ಈ ಬಾರಿ ಈ ಸಮಸ್ಯೆ ಕೊನೆಯಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯಕ್ಕೆ ಬರಲಾಗುವುದು ಎಂದು ಸಿಇಓ ನುಡಿದರು.

ಜಲಾನಯನ ಇಲಾಖೆಯಿಂದ ಅನುಷ್ಠಾನವಾಗಿರುವ ಕಾಮಗಾರಿಯ ಸತ್ಯಾಸತ್ಯತೆಯನ್ನು ತನಿಖೆಗೊಳಪಡಿಸುವಂತೆ ಜನಾರ್ದನ ತೋನ್ಸೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಸುಪ್ರೀತಾ ಕುಲಾಲ್ ಹಾಗೂ ಸುರೇಶ್ ಬಟವಾಡಿ ಅವರು ಕೆಎಸ್ಸಾರ್ಟಿಸಿ ಬಸ್ ಸಮಸ್ಯೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಹಳ್ಳಿ ಪ್ರದೇಶಗಳಲ್ಲಿ ಶಾಲಾ ವೇಳೆಯಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಶಾಲಾ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಸಾರ್ಟಿಸಿ ಅಧಿಕಾರಿ, ಬಸ್‌ಗಳ ಸಮಸ್ಯೆ ಇದ್ದು, ಈ ವಿಚಾರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದ್ಯತೆ ಮೇರೆಗೆ ಶೀಘ್ರದಲ್ಲಿ ಬಸ್ ವ್ಯಸ್ಥೆ ಕಲ್ಪಿಸಲಾಗುವುದು ಎಂದರು.

ಆಯುಷ್ಮಾನ್ ಭಾರತ್ ಯೋಜನೆಗಳ ಬಗ್ಗೆ ಮಾತನಾಡಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಕೌಡೂರು, ಈ ಯೋಜನೆ ಎಲ್ಲರಿಗೂ ತಿಳಿಯುವಂತಾಗಿ ಜನರು ಇದರ ಸೌಲ್ಯ ಪಡೆಯು ವಂತಾಗಬೇಕು. ಆಸ್ಪತ್ರೆಯ ಸಿಬ್ಬಂದಿಗಳು ಜನರಿಗೆ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಕಂಪ್ಯೂಟರ್ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಕಂಪ್ಯೂಟರ್ ನೀಡಿದ್ದರೂ, ಯುಪಿಎಸ್, ಸಿಪಿಯುಗಳ ಕೊರತೆ ಇದೆ. ಮುಂದಿನ ಶೈಕ್ಷಣಿಕ ವರ್ಷದ ಆರಂದೊಳಗೆ ಎಲ್ಲಾ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆಯಾಗಬೇಕು. ಮತ್ತು ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಶೀಘ್ರದಲ್ಲಿ ಶಿಕ್ಷಕರ ನೇಮಕಾತಿಯಾಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಭೆ ಸೂಚನೆಗಳನ್ನು ನೀಡಿತು. ಕಿರು ನೀರು ಸರಬರಾಜು ಘಟಕ ತರವುಗೊಳಿಸುವ ವಿಚಾರ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ವಿಚಾರಗಳನ್ನು ಸಭೆ ಚರ್ಚಿಸಿತು.

ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ ಮಾರಾಳಿ, ಶೋಭಾ ಜಿ ಪುತ್ರನ್, ಜಿಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಗುರುದತ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News