ಆಸ್ಟ್ರೇಲಿಯನ್ ಓಪನ್‌: ಸೆಮಿ ಫೈನಲ್‌ ನಲ್ಲಿ ಮುಗುರುಝಗೆ ಹಾಲೆಪ್ ಎದುರಾಳಿ

Update: 2020-01-29 17:58 GMT

ಮೆಲ್ಬೋರ್ನ್, ಜ.29: ಶ್ರೇಯಾಂಕರಹಿತ ಗಾರ್ಬೈನ್ ಮುಗುರುಝ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪುವುದರೊಂದಿಗೆ ತನ್ನ ಹಳೆಯ ಲಯಕ್ಕೆ ಮರಳಿದರು. ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸಿಮೊನಾ ಹಾಲೆಪ್ ವಿರುದ್ಧ ಸೆಮಿ ಫೈನಲ್ ಆಡಲು ಸಜ್ಜಾಗಿದ್ದಾರೆ.

ವಿಶ್ವದ ಮಾಜಿ ನಂ.1 ಆಟಗಾರ್ತಿ ಮುಗುರುಝ ರಶ್ಯದ 30ನೇ ಶ್ರೇಯಾಂಕದ ಅನಸ್ಟೇಸಿಯ ಪಾವ್ಲಚೆಂಕೋವಾರನ್ನು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 7-5, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಗುರುವಾರ ನಡೆಯಲಿರುವ ಮತ್ತೊಂದು ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ, ಆಸ್ಟ್ರೇಲಿಯ ಆಟಗಾರ್ತಿ ಅಶ್ಲೆ ಬಾರ್ಟಿ ಅಮೆರಿಕದ 14ನೇ ಶ್ರೇಯಾಂಕದ ಸೋಫಿಯಾ ಕೆನಿನ್‌ರನ್ನು ಎದುರಿಸಲಿದ್ದಾರೆ.

28ರ ಹರೆಯದ ಪಾವ್ಲಚೆಂಕೋವಾ 2006 ಹಾಗೂ 2007ರಲ್ಲಿ ಬಾಲಕಿಯರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು. ಸ್ಪೇನ್ ಆಟಗಾರ್ತಿ ಮುಗುರುಝ ಮೊದಲಸೆಟ್‌ನ್ನು 56 ನಿಮಿಷಗಳಲ್ಲಿ ಗೆದ್ದುಕೊಂಡರು. ಪಾವ್ಲಚೆಂಕೋವಾ ಎರಡನೇ ಸೆಟ್‌ನಲ್ಲೂ ಪರದಾಟ ನಡೆಸಿದ್ದು, 2016ರ ಫ್ರೆಂಚ್ ಓಪನ್ ಚಾಂಪಿಯನ್ ಹಾಗೂ 2017ರ ವಿಂಬಲ್ಡನ್ ಚಾಂಪಿಯನ್ ಮುಗುರುಝ ಎರಡನೇ ಸೆಟ್‌ನ್ನು 6-3 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.

ರಶ್ಯದ ಆಟಗಾರ್ತಿ ಪಾವ್ಲಚೆಂಕೋವಾ ಅಂತಿಮ-8ರ ಹಂತದಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿದರು. 49 ಗ್ರಾನ್‌ಸ್ಲಾಮ್ ಟೂರ್ನಿಗಳ ಪೈಕಿ ಆರು ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದ ಪಾವ್ಲಚೆಂಕೋವಾ ಕ್ವಾರ್ಟರ್ ಫೈನಲ್ ದಾಟಲು ವಿಫಲರಾಗಿದ್ದಾರೆ.

2019ರ ದ್ವಿತೀಯಾರ್ಧದಲ್ಲಿ ಕಳಪೆ ಫಾರ್ಮ್‌ನಿಂದಾಗಿ ಬಳಲಿದ್ದ ಮುಗುರುಝ ಮೇ-ಜೂನ್‌ನಲ್ಲಿ ನಡೆದ ಫ್ರೆಂಚ್ ಓಪನ್ ಬಳಿಕ ಸತತ ಎರಡು ಪಂದ್ಯಗಳಲ್ಲಿ ಗೆಲ್ಲಲು ವಿಫಲರಾಗಿದ್ದರು. ಇದಕ್ಕೂ ಮೊದಲು 53 ನಿಮಿಷಗಳಲ್ಲಿ ಕೊನೆಗೊಂಡಿರುವ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಇಸ್ಟೋನಿಯದ ಅನೆಟ್ ಕಾಂಟವಿಟ್‌ರನ್ನು 6-1, 6-1 ನೇರ ಸೆಟ್‌ಗಳಿಂದ ಮಣಿಸಿದ ಹಾಲೆಪ್ ಸೆಮಿ ಫೈನಲ್ ತಲುಪಿದ್ದಾರೆ. 28ರ ಹರೆಯದ ಹಾಲೆಪ್ 2018ರ ಫ್ರೆಂಚ್ ಓಪನ್ ಕಿರೀಟ ಹಾಗೂ ಕಳೆದ ವರ್ಷದ ವಿಂಬಲ್ಡನ್ ಚಾಂಪಿಯನ್‌ಶಿಪ್‌ಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಸೇರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News