ಸ್ಟ್ಯಾನ್ ವಾವ್ರಿಂಕಾ ಗೆ ಸೋಲು, ಝ್ವೆರೆವ್ ಸೆಮಿ ಫೈನಲ್‌ಗೆ ಲಗ್ಗೆ

Update: 2020-01-29 18:02 GMT

ಮೆಲ್ಬೋರ್ನ್, ಜ.29: ಹಿರಿಯ ಟೆನಿಸ್ ಪಟು ಸ್ಟಾನ್ ವಾವ್ರಿಂಕ ಅವರ ಕನಸನ್ನು ಭಗ್ನಗೊಳಿಸಿದ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಝ್ವೆರೆವ್ 2014ರ ಚಾಂಪಿಯನ್ ವಾವ್ರಿಂಕರನ್ನು 1-6, 6-3, 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಝ್ವೆರೆವ್ ಸೆಮಿ ಫೈನಲ್ ಸುತ್ತಿನಲ್ಲಿ ಆಸ್ಟ್ರೀಯದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. ಫೈನಲ್ ತಲುಪಿದರೆ, ನೊವಾಕ್ ಜೊಕೊವಿಕ್ ಅಥವಾ ರೋಜರ್ ಫೆಡರರ್ ಸವಾಲು ಎದುರಾಗಲಿದೆ. ವರ್ಷದ ಮೊದಲ ಪ್ರಮುಖ ಟೂರ್ನಿ ಎಟಿಪಿ ಕಪ್‌ನಲ್ಲಿ ಎಲ್ಲ ಮೂರು ಪಂದ್ಯಗಳಲ್ಲಿ ಸೋತಿದ್ದ ಝ್ವೆರೆವ್ ಪ್ರಾಕ್ಟೀಸ್ ಕೋರ್ಟ್‌ನಲ್ಲಿ ಕಠಿಣ ಶ್ರಮವಹಿಸಿದರು. ತನ್ನ 19ನೇ ಪ್ರಯತ್ನದಲ್ಲಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ್ದಾರೆ.

ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ 34ರ ಹರೆಯದ ವಾವ್ರಿಂಕ 2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟು ರಫೆಲ್ ನಡಾಲ್‌ರನ್ನು ಸೋಲಿಸಿದ್ದರು. 2017ರ ಬಳಿಕ ಮೊದಲ ಗ್ರಾನ್‌ಸ್ಲಾಮ್ ಗೆಲ್ಲಬೇಕೆಂಬ ಸ್ವಿಸ್ ಆಟಗಾರ ವಾವ್ರಿಂಕ ಕನಸನ್ನು ಝ್ವೆರೆವ್ ನುಚ್ಚುನೂರು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News