ಮಂಗಳೂರು: ಎಸ್‌ಡಿಪಿಐನಿಂದ ಗೋಡ್ಸೆ ಪ್ರತಿಕೃತಿ ದಹನ

Update: 2020-01-30 07:51 GMT

ಮಂಗಳೂರು, ಜ.30: ‘ಗಾಂಧಿಯ ಹಂತಕರು ದೇಶದ ಹಂತಕರು’ ಘೋಷಣೆಯಡಿ ದೇಶಾದ್ಯಂತ ನಡೆದ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ಪುರಭವನದ ಮುಂಭಾಗ ಗುರುವಾರ ಎಸ್‌ಡಿಪಿಐ ಕಾರ್ಯಕರ್ತರು ‘ನಾನು ಗೋಡ್ಸೆ ಗಾಂಧಿಯ ಹಂತಕ’ ಹಣೆಪಟ್ಟಿಯಿದ್ದ ನಾಥೂರಾಂ ಗೋಡ್ಸೆಯ ಪ್ರತಿಕೃತಿಯನ್ನು ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಕೃಷ್ಣಾಪುರ, ಜಾತ್ಯತೀತ, ಸೌಹಾರ್ದ ಪರಂಪರೆಯನ್ನು ಎತ್ತಹಿಡಿದ ರಾಷ್ಟ್ರಪಿತ ಗಾಂಧೀಜಿ ಮೇಲೆ ಸಂಘಪರಿವಾರದ ವಕ್ರದೃಷ್ಟಿ ಬಿದ್ದು ಹತ್ಯೆಗೆ ಕಾರಣವಾಯಿತು. ಆರೆಸ್ಸೆಸ್, ಸಂಘ ಪರಿವಾರವನ್ನು ದೇಶದಿಂದಲೇ ಹೊರಹಾಕಬೇಕು ಎಂದು ಒತ್ತಾಯಿಸಿದರು.

ಗಾಂಧೀಜಿಯ ಹತ್ಯೆಯ ನಂತರ ರಕ್ತದಾಹಿಗಳ ಪರಂಪರೆ ಮುಂದುವರಿಯುತ್ತಲೇ ಇದೆ. ಆದಿವಾಸಿ, ದಲಿತರು, ಕ್ರೈಸ್ತರು, ಮುಸ್ಲಿಮರನ್ನು ಕೆಣಕುತ್ತಿದ್ದಾರೆ. ಥಳಿತ, ಹತ್ಯೆ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸಂಘಪರಿವಾರವು ಅಧಿಕಾರಕ್ಕೆ ಬಂದ ಮೇಲೆ ದರ್ಪ ತೋರುತ್ತಿದೆ. ವಿವಾದಾತ್ಮಕ ಕಾಯ್ದೆಗಳ ಹೇರಿಕೆಯನ್ನು ವಿರೋಧಿಸುವವರಿಗೆ ದೇಶದ್ರೋಹಿ ಪಟ್ಟ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘ ಪರಿವಾರದ ಗುಪ್ತ ಅಜೆಂಡಾವನ್ನು ಸಮಾಜ ಅರ್ಥ ಮಾಡಿಕೊಳ್ಳುತ್ತಿದೆ. ಆರೆಸ್ಸೆಸ್‌ಗೆ ಕೊನೆಯ ಮೊಳೆ ಹೊಡೆಯಲು ಕೆಲವೇ ಸಮಯವಿದೆ. ಆರೆಸ್ಸೆಸ್ ನಾಶವಾಗಲು ಕಾಲ ಕೂಡಿಬಂದಿದೆ. ದೇಶದಲ್ಲಿ ವಿದ್ಯಾರ್ಥಿಗಳು, ಚಿಂತಕರು, ಸಾಮಾಜಿಕ ಹೋರಾಟಗಾರರು ಪ್ರತಿಭಟಿಸುತ್ತಿರುವುದನ್ನು ಗಮನಿಸಿದರೆ ಸಂಘ ಪರಿವಾರದ ಆಡಳಿತ ಕೊನೆಗಾಣಲಿದೆ ಎಂದರು.

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ದೇಶದ್ರೋಹಿ ನಾಥೂರಾಮ್ ಗೋಡ್ಸೆ ನಡೆಸಿದ ಗಾಂಧಿ ಹತ್ಯೆಯು ದೇಶದ ಮೊದಲ ಭಯೋತ್ಪಾದನಾ ಕೃತ್ಯವಾಗಿದೆ. ಅಹಿಂಸಾವಾದಿ, ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದ ಗಾಂಧಿ ಕೊಂದ ಗೋಡ್ಸೆಯ ಆರಾಧನೆಯು ಖಂಡನೀಯ. ಗೋಡ್ಸೆಗಾಗಿ ದೇವಸ್ಥಾನ ಕಟ್ಟುವ, ಪ್ರತಿಮೆ ನಿರ್ಮಾಣದಂತಹ ವಿದ್ವಂಸಕ ಕೃತ್ಯಗಳು ಹೆಚ್ಚುತ್ತಲೇ ಇವೆ. ದೇಶ ದೊಡ್ಡ ಗಂಡಾಂತರದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಮಂಗಳೂರು ದಕ್ಷಿಣ ಕ್ಷೇತ್ರದ ಸುಹೈಲ್‌ಖಾನ್ ಫಳ್ನೀರ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಮುನೀಬ್ ಬೆಂಗ್ರೆ, ಶಾಫಿ ಬಬ್ಬುಕಟ್ಟೆ, ಇಸ್ಮಾಯೀಲ್ ಶಾಫಿ, ಅಬ್ಬಾಸ್ ಕಿನ್ಯ, ಆಸಿಫ್ ಕೋಟೆಬಾಗಿಲು, ಅಝರ್ ಚೊಕ್ಕಬೆಟ್ಟು, ಮೊಯ್ದಿನ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News