×
Ad

ಸಿಎಎ ಕುರಿತು ರಾಷ್ಟ್ರಪತಿ ಭಾಷಣ ವಿರೋಧಿಸಿ ವಿಪಕ್ಷಗಳಿಂದ ಪ್ರತಿಭಟನೆ: 'ನೋ ಸಿಎಎ' ಪೋಸ್ಟರ್ ಪ್ರದರ್ಶನ

Update: 2020-01-31 12:43 IST

ಹೊಸದಿಲ್ಲಿ, ಜ.31: ದೇಶವ್ಯಾಪಿ ಪ್ರತಿಭಟನೆಗೆ ಕಾರಣವಾಗಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಂಸೆ ವ್ಯಕ್ತಪಡಿಸಿದರು. ಇದಕ್ಕೆ ಆಡಳಿತಾರೂಢ ಪಕ್ಷದ ಸದಸ್ಯರು ಮೇಜನ್ನು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರೆ, ವಿಪಕ್ಷಗಳು ‘ಶೇಮ್ ಶೇಮ್’ಎಂದು ಕೂಗುತ್ತಾ ಪ್ರತಿಭಟನೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಶುಕ್ರವಾರ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಕೋವಿಂದ್,ಸಿಎಎ ಅಂಗೀಕಾರಗೊಳಿಸುವ ಮೂಲಕ ಮಹಾತ್ಮ ಗಾಂಧೀಜಿ ಅವರ ಕನಸನ್ನು ಈಡೇರಿಸಲಾಗಿದೆ ಎಂದು ಹೇಳಿದರು. ಇದಕ್ಕೆ ವಿಪಕ್ಷಗಳು ಘೋಷಣೆ ಕೂಗುತ್ತಾ ಪ್ರತಿಭಟನೆ ವ್ಯಕ್ತಪಡಿಸಿದವು.

 ಹಿಂದೂಗಳು, ಸಿಖ್ಖರು, ಬೌದ್ದರು, ಜೈನರು ಹಾಗೂ ಇತರ ಧರ್ಮದ ಅಲ್ಪ ಸಂಖ್ಯಾತರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ(ಉತ್ತರ ಪಾಕಿಸ್ತಾನ)ದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದರೆ ಅವರಿಗೆ ಭಾರತದ ಪೌರತ್ವ ನೀಡಬೇಕೆಂದು ದೇಶ ವಿಭಜನೆಯ ವೇಳೆ ಮಹಾತ್ಮ ಗಾಂಧೀಜಿ ಹೇಳಿದ್ದರು. ರಾಷ್ಟ್ರಪಿತ ಗಾಂಧೀಜಿ ಅವರ ಹಾರೈಕೆಯನ್ನು ನಾವೆಲ್ಲರೂ ಗೌರವಿಸಬೇಕು. ಬಾಪು ಅವರ ಕನಸನ್ನು ಈಡೇರಿಸಲು ಎರಡೂ ಸದನಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿರುವುದಕ್ಕೆ ನನಗೆ ಸಂತೋಷವಾಗಿದೆ’’ ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದ್ದಾರೆ.

ರಾಷ್ಟ್ರಪತಿಯವರ ಈ ಮಾತಿಗೆ ಆಡಳಿತಾರೂಢ ಸದಸ್ಯರು ಡೆಸ್ಕನ್ನು ಬಡಿದು ಪ್ರಶಂಸೆ ವ್ಯಕ್ತಪಡಿಸಿದರೆ, ಎದ್ದುನಿಂತ ವಿಪಕ್ಷ ಸದಸ್ಯರುಗಳು ‘ಶೇಮ್’ಎಂದು ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News