×
Ad

ಶರ್ಜೀಲ್ ಇಮಾಮ್ ನಂತಹವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2020-01-31 16:14 IST

ಹೊಸದಿಲ್ಲಿ, ಜ.31: ಭಾರತವನ್ನು ವಿಭಜಿಸುವುದಾಗಿ ಹೇಳುವ ಶರ್ಜಿಲ್ ಇಮಾಮ್‌ನಂತಹ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ.

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಶಾಹೀನ್‌ಭಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಬುಧವಾರ ಮಾತನಾಡಿದ್ದ ಶರ್ಜಿಲ್ ಇಮಾಮ್, ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಪ್ರತ್ಯೇಕಿಸಬೇಕು ಎಂದು ಕರೆ ನೀಡಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಶಿವಸೇನೆ, ಶರ್ಜಿಲ್ ಇಮಾಮ್‌ನ ಕೈಗಳನ್ನು ಕತ್ತರಿಸಬೇಕು ಎಂದು ಹೇಳಿಕೆ ನೀಡಿತ್ತು. ಇದೇ ವಿಷಯದ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಸಂಗೀತ್ ಸೋಮ್, ಭಾರತವನ್ನು ವಿಭಜಿಸುವ ಹೇಳಿಕೆ ನೀಡಿರುವ ಶರ್ಜೀಲ್ ಇಮಾಮ್‌ರಂತಹ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಸಾಯಿಸಬೇಕು ಎಂದು ಹೇಳಿದ್ದಾರೆ.

ಶಾಹೀನ್‌ಭಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಬೇರೇನೂ ಕೆಲಸವಿಲ್ಲ. ಸಮಯ ಕಳೆಯಲು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆಗಳಿಗೆ ಸಿಗುತ್ತಿರುವ ಆರ್ಥಿಕ ನೆರವಿನ ಮೂಲವನ್ನು ಪತ್ತೆಹಚ್ಚುವ ಅಗತ್ಯವಿದೆ ಎಂದಿರುವ ಸೋಮ್, ಪ್ರತಿಭಟನಾ ನಿರತ ಮಹಿಳೆಯರಿಗೆ ದಿನಕ್ಕೆ 500 ರೂ. ಕೂಲಿ ದೊರಕುತ್ತಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ್ದಾರೆ.

2013ರ ಮುಝಫರ್‌ನಗರ ದಂಗೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಶಾಸಕ ಸಂಗೀತ್ ಸೋಮ್ ಹೆಸರೂ ಸೇರ್ಪಡೆಯಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News