ನಾಳೆ ಕೇಂದ್ರ ಬಜೆಟ್: ಜನರ ನಿರೀಕ್ಷೆಗಳೇನು ?
ಹೊಸದಿಲ್ಲಿ, ಜ.31: ಕೇಂದ್ರ ವಿತ್ತಸಚಿವೆ ಅವರು 2020-21ನೇ ಸಾಲಿನ ಕೇಂದ್ರ ಸರಕಾರದ ಮುಂಗಡಪತ್ರವನ್ನು ಶನಿವಾರ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಇದು ಮೇ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದ ಮೋದಿ ಸರಕಾರದ ಎರಡನೇ ಮುಂಗಡಪತ್ರವಾಗಿದೆ. ಇದು ಸೀತಾರಾಮನ್ ಅವರ ಎರಡನೇ ಬಜೆಟ್ ಕೂಡ ಹೌದು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸೀತಾರಾಮನ್‌ಗಿಂತ ಮೊದಲು ಕೇಂದ್ರ ಬಜೆಟ್ (1970)ನ್ನು ಮಂಡಿಸಿದ ಏಕೈಕ ಮಹಿಳೆಯಾಗಿದ್ದರು.
2016ರವರೆಗೂ ಕೇಂದ್ರ ಮುಂಗಡಪತ್ರವನ್ನು ಪ್ರತಿ ವರ್ಷದ ಫೆಬ್ರವರಿ ತಿಂಗಳ ಕೊನೆಯ ದಿನ ಮಂಡಿಸಲಾಗುತ್ತಿತ್ತು. 2017ರಲ್ಲಿ ಈ ಪದ್ಧತಿಯನ್ನು ಬದಲಿಸಿದ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಆಗಿನಿಂದ ಪ್ರತಿ ವರ್ಷದ ಫೆ.1ರಂದು ಮುಂಗಡಪತ್ರವನ್ನು ಮಂಡಿಸುತ್ತಿದೆ. ನೂತನ ಪದ್ಧತಿಯಡಿ ಮೊದಲ ಮುಂಗಡಪತ್ರವನ್ನು ಆಗಿನ ವಿತ್ತಸಚಿವ ಅರುಣ ಜೇಟ್ಲಿ ಅವರು ಮಂಡಿಸಿದ್ದರು.
ಮುಂಗಡಪತ್ರ ನಿರೀಕ್ಷೆಗಳು
ಸುಮಾರು ಒಂದು ವರ್ಷದಿಂದ ಕಾಡುತ್ತಿರುವ ಆರ್ಥಿಕ ಮಂದಗತಿಯ ಹಿನ್ನೆಲೆಯಲ್ಲಿ ದೇಶವು ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರ ಕಣ್ಣುಗಳು ಶನಿವಾರ ಸೀತಾರಾಮನ್ ಮಂಡಿಸಲಿರುವ ಮುಂಗಡಪತ್ರದ ಮೇಲೆ ನೆಟ್ಟಿವೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ನಿರುದ್ಯೋಗ ಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಕ್ರಮಗಳನ್ನು ಸರಕಾರವು ಮುಂಗಡಪತ್ರದಲ್ಲಿ ಘೋಷಿಸುವ ನಿರೀಕ್ಷೆಯಿದೆ. ಕಳೆದ ವರ್ಷ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಕಳೆದ 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದ್ದು ಸರಕಾರದ ಕಳವಳವನ್ನು ಇನ್ನಷ್ಟು ಹೆಚ್ಚಿಸಿತ್ತು,ಜೊತೆಗೆ ದೇಶವ್ಯಾಪಿ ಎಲ್ಲ ವರ್ಗಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಸೀತಾರಾಮನ್ ಅವರು ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಿಸುತ್ತಾರೆ ಎಂದು ವೇತನದಾರ ವರ್ಗವು ನಿರೀಕ್ಷಿಸಿದೆ. ಪ್ರಸಕ್ತ ಆದಾಯ ತೆರಿಗೆ ಮಿತಿಯು 2.5 ಲ.ರೂ. ಮತ್ತು ಹಿರಿಯ ನಾಗರಿಕರಿಗೆ ಮೂರು ಲ.ರೂ.ಆಗಿದೆ.
ಬೇಡಿಕೆ ಮತ್ತು ಬಳಕೆಯನ್ನು ಹೆಚ್ಚಿಸಲು ಸರಕಾರದಿಂದ ಪರಿಣಾಮಕಾರಿ ಕ್ರಮಗಳ ನಿರೀಕ್ಷೆಯಲ್ಲಿ ದೇಶದ ಕಾರ್ಪೊರೇಟ್ ಕ್ಷೇತ್ರವಿದೆ. ಕಳೆದೊಂದು ವರ್ಷದಿಂದ ಕಾರ್ಪೊರೇಟ್ ಕ್ಷೇತ್ರವು ಮಂದಗತಿಯ ಬೇಡಿಕೆಯಿಂದಾಗಿ ಹೈರಾಣಾಗಿದೆ.
ಆಟೊಮೊಬೈಲ್ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಇನ್ನೊಂದು ಪ್ರಮುಖ ಕ್ಷೇತ್ರವಾಗಿದೆ. ಬೇಡಿಕೆ ಕುಸಿದಿರುವುದು ಆಟೊಮೊಬೈಲ್ ಕ್ಷೇತ್ರಕ್ಕೆ ಮಾತ್ರವಲ್ಲ,ವಾಹನ ಬಿಡಿಭಾಗಗಳ ಕೈಗಾರಿಕೆಗೂ ಹೊಡೆತ ನೀಡಿದೆ. ಹಲವಾರು ಕಾರು ತಯಾರಿಕೆ ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದ್ದು ಮಾತ್ರ ಅಲ್ಲ,ತಮ್ಮ ಹಲವಾರು ತಯಾರಿಕೆ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಅನಿವಾರ್ಯತೆಗೂ ಒಳಗಾಗಿವೆ.