ಜಾಮಿಯಾದಲ್ಲಿ ಗುಂಡಿಕ್ಕಿದವನ ಗುರಿ ಶಾಹಿನ್‌ಬಾಗ್ ಆಗಿತ್ತು: ಪೊಲೀಸರ ಹೇಳಿಕೆ

Update: 2020-01-31 17:38 GMT

ಹೊಸದಿಲ್ಲಿ, ಜ.31: ಜಾಮಿಯಾ ಮಿಲ್ಲಿಯಾ ವಿವಿ ಬಳಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿ ಒಬ್ಬನನ್ನು ಗಾಯಗೊಳಿಸಿದ ಯುವಕ ಸಾಮಾಜಿಕ ಮಾಧ್ಯಮ, ಟಿವಿ ದೃಶ್ಯಗಳು ಹಾಗೂ ವಾಟ್ಸ್ಯಾಪ್ ವೀಡಿಯೊಗಳಿಂದ ಪ್ರಭಾವಿತನಾಗಿದ್ದು, ಆತನ ಗುರಿ ಶಾಹೀನ್‌ ಬಾಗ್ ಆಗಿತ್ತು. ಆತನಲ್ಲಿ ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪದ ಭಾವನೆಯಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ಉತ್ತರಪ್ರದೇಶದ ಜೆವಾರ್ ನಗರದ ನಿವಾಸಿಯಾಗಿರುವ ಆರೋಪಿ ಯುವಕ ತಾನು ಶಾಲೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ದಿಲ್ಲಿಯತ್ತ ಬಸ್ ಮೂಲಕ ಪ್ರಯಾಣಿಸಿದ್ದ. ಅಲ್ಲದೆ ತನ್ನ ಯೋಜನೆಯಂತೆ ಸ್ನೇಹಿತನಿಂದ ಸ್ಥಳೀಯವಾಗಿ ತಯಾರಿಸಿದ್ದ ಪಿಸ್ತೂಲನ್ನು ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

 ಆತನಿಗೆ ಶಾಹೀನ್‌ಭಾಗ್‌ಗೆ ಹೋಗುವ ದಾರಿ ತಿಳಿದಿರಲಿಲ್ಲ. ಆಟೊರಿಕ್ಷಾದಲ್ಲಿ ಶಾಹೀನ್‌ಭಾಗ್‌ನತ್ತ ಹೋಗುತ್ತಿದ್ದಾಗ ಅಲ್ಲಿಯ ರಸ್ತೆ ಮುಚ್ಚಲಾಗಿದೆ ಎಂದು ತಿಳಿಸಿದ್ದ ಚಾಲಕ ಆತನನ್ನು ಜಾಮಿಯಾ ವಿವಿ ಬಳಿ ಕೆಳಗಿಳಿಸಿ ಇಲ್ಲಿಂದ ನಡೆದುಕೊಂಡು ಹೋದರೆ ಶಾಹೀನ್‌ಭಾಗ್ ತಲುಪಬಹುದು ಎಂದಿದ್ದ. ಜಾಮಿಯಾ ವಿವಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಆಗ ಫೇಸ್‌ಬುಕ್‌ನಲ್ಲಿ ಲೈವ್ ಆಗಿ ಅಲ್ಲಿಯ ಘಟನೆಯನ್ನು ಸುಮಾರು ಒಂದು ಗಂಟೆ ಪ್ರಸಾರ ಮಾಡಿದ ಬಳಿಕ ಪ್ರತಿಭಟನಾಕಾರರ ನಡುವೆ ನುಸುಳಿ ತನ್ನಲ್ಲಿದ್ದ ಪಿಸ್ತೂಲನ್ನು ಹೊರಗೆ ತೆಗೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

 ಆರೋಪಿ ಯುವಕ ಪೊಲೀಸರಿಗೆ ಬೆನ್ನು ಹಾಕಿದ್ದ ಕಾರಣ ಆತನ ಕೈಯಲ್ಲಿದ್ದ ಪಿಸ್ತೂಲನ್ನು ಮೊದಲು ತಾವು ಗಮನಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News