ಇಂಗ್ಲೆಂಡ್ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ರೋಚಕ ಜಯ

Update: 2020-01-31 18:23 GMT

ಕ್ಯಾನ್‌ಬೆರ್ರಾ, ಜ.31: ನಾಯಕಿ ಹರ್ಮನ್‌ಪ್ರೀತ್ ಕೌರ್ ಆಕರ್ಷಕ ಬ್ಯಾಟಿಂಗ್(ಔಟಾಗದೆ 42)ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ವನಿತೆಯರ ತ್ರಿಕೋನ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.

ಭಾರತದ ಸ್ಪಿನ್ನರ್‌ಗಳಾದ ರಾಜೇಶ್ವರಿ ಗಾಯಕ್ವಾಡ್(2-19), ದೀಪ್ತಿ ಶರ್ಮಾ(2-30) ಹಾಗೂ ಎಡಗೈ ಸ್ಪಿನ್ನರ್ ರಾಧಾ ಯಾದವ್(1-33)ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್‌ಗೆ ನಿಯಂತ್ರಿಸಿದರು. ಬಲಗೈ ಮಧ್ಯಮ ವೇಗದ ಬೌಲರ್ ಶಿಖಾ ಪಾಂಡೆ(2-33)ಕೂಡ ಮನುಕಾ ಓವಲ್‌ನಲ್ಲಿ ಆತಿಥೇಯರಿಗೆ ಸವಾಲಾದರು.

ಗೆಲ್ಲಲು 148 ರನ್ ಬೆನ್ನಟ್ಟಿದ ಭಾರತದ ಆರಂಭ ಚೆನ್ನಾಗಿರಲಿಲ್ಲ. 15ರ ಬಾಲಕಿ ಶಫಾಲಿ ವರ್ಮಾ(30), ಸ್ಮತಿ ಮಂಧಾನ(15) ಹಾಗೂ ಜೆಮಿಮಾ ರೊಡ್ರಿಗಸ್(26)ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿಸಲು ವಿಫಲರಾದರು. ವೇದಾ ಕೃಷ್ಣಮೂರ್ತಿ(7) ಹಾಗೂ ತಾನಿಯಾ ಭಾಟಿಯಾ(11)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆ ನಿಲ್ಲಲು ವಿಫಲರಾದರು. ಆಗ ನಾಯಕಿ ಹರ್ಮನ್‌ಪ್ರೀತ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿದರು.

ಕೊನೆಯ ಓವರ್‌ನಲ್ಲಿ ಗೆಲ್ಲಲು ಆರು ರನ್ ಅಗತ್ಯವಿದ್ದಾಗ ಸಿಕ್ಸರ್ ಎತ್ತಿದ ಹರ್ಮನ್‌ಪ್ರೀತ್ ಮೂರು ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಅಗ್ರ ಸರದಿಯ ವೈಫಲ್ಯಕ್ಕೆ ಒಳಗಾಗಿದ್ದು, ಆರಂಭಿಕ ಬ್ಯಾಟ್ಸ್ ವುಮನ್‌ಗಳಾದ ಅಮಿ ಜೋನ್ಸ್(1) ಹಾಗೂ ಡ್ಯಾನಿ ವ್ಯಾಟ್(4)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಟಾಲಿ ಸಿವೆರ್(20) ಹಾಗೂ ಫ್ರಾನ್ ವಿಲ್ಸನ್(7)ಔಟಾದಾಗ ಇಂಗ್ಲೆಂಡ್ 10 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 59 ರನ್ ಗಳಿಸಿತು. ಸಂಕಷ್ಟದಲ್ಲಿದ್ದ ತಂಡವನ್ನು ಆಧರಿಸಿದ ನಾಯಕಿ ಹೀದರ್ ನೈಟ್ 44 ಎಸೆತಗಳಲ್ಲಿ 67 ರನ್ ಗಳಿಸಿದರು. ನೈಟ್ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ವಿಕೆಟ್‌ಕೀಪರ್ ಟಮ್ಮಿ ಬೀವೌಂಟ್ 27 ಎಸೆತಗಳಲ್ಲಿ 37 ರನ್ ಗಳಿಸಿ ತನ್ನ ನಾಯಕಿಗೆ ಸಾಥ್ ನೀಡಿದರು. ಈ ಇಬ್ಬರು ಆಟಗಾರ್ತಿಯರು ಇಂಗ್ಲೆಂಡ್ ಹೋರಾಟಕಾರಿ ಮೊತ್ತ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News