ಹಿಝ್ಬುಲ್-ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ ವರ್ಷವಿಡೀ ವೇತನ ಪಡೆಯುತ್ತಿದ್ದ ದವೀಂದರ್ ಸಿಂಗ್

Update: 2020-02-01 07:23 GMT
ದವೀಂದರ್ ಸಿಂಗ್

ಶ್ರೀನಗರ: ಹಿಝ್ಬುಲ್-ಮುಜಾಹಿದ್ದೀನ್ ಉಗ್ರ ಸಂಘಟನೆಯ ನವೀದ್ ಮುಸ್ತಾಕ್ ಜತೆ ಜ. 11ರಂದು ಬಂಧಿಸಲ್ಪಟ್ಟ ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಹೆಸರು ಉಗ್ರಗಾಮಿ ಸಂಘಟನೆಯ ವೇತನ ಪಟ್ಟಿಯಲ್ಲಿ ಸೇರಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿರುವುದಾಗಿ indianexpress.com ವರದಿ ಮಾಡಿದೆ.

ನವೀದ್‌ನನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ದು ಸುರಕ್ಷಿತ ವಸತಿ ವ್ಯವಸ್ಥೆ ಮಾಡಿಕೊಡಲು ಹಣ ಪಡೆದಿರುವುದು ಮಾತ್ರವಲ್ಲದೇ, ವರ್ಷವಿಡೀ ನಿಯತವಾಗಿ ಉಗ್ರಗಾಮಿ ಸಂಘಟನೆಯಿಂದ ಹಣ ಪಡೆಯುತ್ತಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ಉನ್ನತ ಮೂಲಗಳು ಹೇಳಿವೆ.

ನವೀದ್‌ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆದಿತ್ತು. ಇದಕ್ಕೆ 20 ರಿಂದ 30 ಲಕ್ಷ ರೂ. ನೀಡುವಂತೆ ದವೀಂದರ್ ಸಿಂಗ್  ಉಗ್ರ ಸಂಘಟನೆ ಜತೆ ಮಾತುಕತೆ ನಡೆಸಿದ್ದ. ಆದರೆ ಪೂರ್ಣ ಹಣ ಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ. ಅಮಾನತುಗೊಂಡಿರುವ ಉಪ ಪೊಲೀಸ್ ಅಧೀಕ್ಷಕ ದವೀಂದರ್ ಸಿಂಗ್, ಕಳೆದ ವರ್ಷ ಇದೇ ರೀತಿಯಲ್ಲಿ ನವೀದ್‌ನನ್ನು ಜಮ್ಮುವಿಗೆ ಕರೆದೊಯ್ದು ಚಳಿಗಾಲದಲ್ಲಿ ವಸತಿಗೆ ವ್ಯವಸ್ಥೆ ಮಾಡಿದ್ದಾಗಿಯೂ ಮೂಲಗಳು ತಿಳಿಸಿವೆ.

ಎನ್‌ಐಎ ತನಿಖಾಧಿಕಾರಿಗಳ ಜತೆಗೆ ವಿಚಾರಣೆಗೆ ದವೀಂದರ್ ಸಿಂಗ್  ಸಹಕರಿಸುತ್ತಿಲ್ಲ. ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಯ ವ್ಯಕ್ತಿಗಳನ್ನು ಗುರುತಿಸಲು ಕೂಡಾ ಸಹಕರಿಸುತ್ತಿಲ್ಲ. ತಾನು ಅಮಾಯಕ ಎಂದು ಹೇಳಿಕೊಳ್ಳುತ್ತಿದ್ದಾನೆ. ತಾಂತ್ರಿಕ ಅಂಶಗಳ ಆಧಾರದಲ್ಲಿ ತನಿಖೆ ನಡೆಸಿದಾಗ ಆತನ ಸಂಪರ್ಕ ಹಾಗೂ ಹಣಕಾಸು ಬಗ್ಗೆ ಮತ್ತಷ್ಟು ವಿವರಗಳು ಲಭ್ಯವಾಗಲಿವೆ ಎಂಬ ಆಶಯವನ್ನು ಉನ್ನತ ಅಧಿಕಾರಿ ವ್ಯಕ್ತಪಡಿಸಿದ್ದಾರೆ.

ದವೀಂದರ್ ಸಿಂಗ್  1990ರಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ. ವೃತ್ತಿ ಜೀವನದಲ್ಲಿ ಹಲವು ಮಂದಿ ಉಗ್ರರ ಹತ್ಯೆ, ಬಂಧನ ಮತ್ತು ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಂಗ್, ಹುಟ್ಟೂರು ಸೋಪಿಯಾನಾ ಜತೆ ನಿಕಟ ಸಂಪರ್ಕ ಹೊಂದಿದ್ದ. 2017ರ ಪುಲ್ವಾಮಾ ಕಾರ್ಯಾಚರಣೆಗಾಗಿ 2018ರಲ್ಲಿ ಶೌರ್ಯ ಪ್ರಶಸ್ತಿಯನ್ನೂ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News