×
Ad

ಬಜೆಟ್ 2020: ಪ್ರಮುಖ ಘೋಷಣೆಗಳಿವು…

Update: 2020-02-01 19:42 IST

ಹೊಸದಿಲ್ಲಿ, ಫೆ.1: ದೇಶದ ಅರ್ಥವ್ಯವಸ್ಥೆಯ ಮೂಲಗಳು ಸದೃಢವಾಗಿದ್ದು, ಹಣದುಬ್ಬರವನ್ನು ಸಮರ್ಪಕವಾಗಿ ನಿಯಂತ್ರಿಸಲಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2020ರ ಕೇಂದ್ರ ಬಜೆಟ್ ಮಂಡಿಸಿದ ಸಂದರ್ಭ ಅವರು ಮಾಡಿದ ಭಾಷಣದ ಪ್ರಮುಖ ಅಂಶಗಳು ಹೀಗಿವೆ.

ಆದಾಯ ತೆರಿಗೆ: ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ದರದಲ್ಲಿ ಗಮನಾರ್ಹ ಕಡಿತ ಮಾಡಲಾಗಿದ್ದು ಇದರಿಂದ ಸರಕಾರ ವಾರ್ಷಿಕ 40,000 ಕೋಟಿ ರೂ. ಆದಾಯ ತ್ಯಜಿಸಿದಂತಾಗುತ್ತದೆ.

ಶಿಕ್ಷಣ: ಶೀಘ್ರವೇ ಹೊಸ ಶಿಕ್ಷಣ ನೀತಿಯನ್ನು ಘೋಷಿಸಲಾಗುವುದು ಮತ್ತು 2020-21ರಲ್ಲಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸುಮಾರು 99,300 ಕೋಟಿ ರೂ. ಒದಗಿಸಲಿದೆ.

ಕೌಶಲ್ಯ ಅಭಿವೃದ್ಧಿ: ದೇಶದ ಯುವಜನತೆಗೆ ಪ್ರಾಸಂಗಿಕ (ಪ್ರಸ್ತುತ) ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಉದ್ದೇಶದ ಸ್ಕಿಲ್ ಇಂಡಿಯಾ ಯೋಜನೆಗೆ ಸರಕಾರ 3,000 ಕೋಟಿ ರೂ. ಒದಗಿಸಲಿದೆ.

ಸಂಸ್ಕೃತಿ ಇಲಾಖೆ: ಸಂಸ್ಕೃತಿ ಇಲಾಖೆಗೆ 3,150 ಕೋಟಿ ರೂ. ಹಾಗೂ ಪ್ರವಾಸೋದ್ಯಮ ಇಲಾಖೆಗೆ 2,500 ಕೋಟಿ ರೂ. ನಿಗದಿ. ರಾಂಚಿ ಮತ್ತು ಜಾರ್ಖಂಡ್‌ನಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ. ಹರ್ಯಾಣ, ಉತ್ತರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ತಮಿಳುನಾಡಿನ ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ ಅಲ್ಲಿ ಮ್ಯೂಸಿಯಂ ಸ್ಥಾಪಿಸಲಾಗುವುದು.

ಉದ್ಯಮ ಮತ್ತು ವಾಣಿಜ್ಯ : 2020-21ರಲ್ಲಿ ಉದ್ಯಮ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ಮತ್ತು ಅಭಿವೃದ್ಧಿಗಾಗಿ 27,300 ಕೋಟಿ ರೂ. ಮೊತ್ತ ನಿಗದಿ. ಪ್ರತೀ ಜಿಲ್ಲೆಯನ್ನೂ ರಫ್ತು ಕೇಂದ್ರವನ್ನಾಗಿಸುವ ಆಶಯವನ್ನು ಸರಕಾರ ಹೊಂದಿದೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳು: 2020-21ರ ಆರ್ಥಿಕ ವರ್ಷದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ 30,757 ಕೋಟಿ ರೂ, ಲಡಾಖ್‌ಗೆ 5,958 ಕೋಟಿ ರೂ. ನೀಡಲಾಗುವುದು.

ರಿಯಲ್ ಎಸ್ಟೇಟ್: ಕೈಗೆಟಕುವ ದರದ ಗೃಹ ಸಾಲದ ಮೇಲಿನ ಬಡ್ಡಿಗೆ ಹೆಚ್ಚುವರಿ 1.5 ಲಕ್ಷ ರೂ. ತೆರಿಗೆ ರಿಯಾಯಿತಿಯನ್ನು 2021ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಕೈಗೆಟಕುವ ದರದ ವಸತಿ ಯೋಜನೆಗಳನ್ನು ನಿರ್ವಹಿಸುವ ಸಂಸ್ಥೆಗಳಿಗೆ ‘ತೆರಿಗೆ ರಜೆ‘ (ತೆರಿಗೆ ತಡವಾಗಿ ಪಾವತಿಸುವ ಅವಧಿ)ಯನ್ನು 1 ವರ್ಷಕ್ಕೆ ವಿಸ್ತರಿಸಲಾಗುವುದು.

ಮೂಲಸೌಕರ್ಯ: ದೇಶದ ಮೂಲಸೌಕರ್ಯ ಅಧಿಕಗೊಳಿಸಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ 103 ಲಕ್ಷ ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆಯನ್ನು ಸರಕಾರ ಆರಂಭಿಸಿದ್ದು ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವುದರ ಜೊತೆಗೆ ಶೀಘ್ರವೇ ಸಂಚಲನ ನೀತಿಯನ್ನು ಬಿಡುಗಡೆಗೊಳಿಸಲಾಗುವುದು.

ಎಂಎಸ್‌ಎಂಇ ಕ್ಷೇತ್ರ: ಎಂಎಸ್‌ಎಂಇ (ಮೈಕ್ರೊ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್) ಕ್ಷೇತ್ರಕ್ಕೆ ಅಧೀನ ಸಾಲ ಒದಗಿಸುವ ಬಗ್ಗೆ ಯೋಜನೆಯನ್ನು ಆರಂಭಿಸಲಾಗುವುದು. ಎಂಎಸ್‌ಎಂಇ ಕ್ಷೇತ್ರಕ್ಕೆ ಸಾಲ ಪುನರ್ರಚನೆ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸುವಂತೆ ಆರ್‌ಬಿಐಗೆ ಸೂಚಿಸಲಾಗಿದೆ.

ಕೃಷಿ: ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 2020-21ರ ಆರ್ಥಿಕ ವರ್ಷದಲ್ಲಿ 2.83 ಲಕ್ಷ ರೂ. ಮೊತ್ತ ನಿಗದಿ. 2020-21ರಲ್ಲಿ ರೈತರಿಗೆ ಸಾಲ ಒದಗಿಸಲು 15 ಲಕ್ಷ ಕೋಟಿ ರೂ. ನಿಗದಿ.

ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನ: ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನ ಅದ್ಭುತ ಫಲಿತಾಂಶ ದಾಖಲಿಸಿದ್ದು ಎಲ್ಲಾ ಹಂತಗಳಲ್ಲೂ ಬಾಲಕರಿಗಿಂತ ಬಾಲಕಿಯರ ಒಟ್ಟು ದಾಖಲಾತಿ ಅನುಪಾತ ಹೆಚ್ಚಿದೆ. ಮಹಿಳೆಯರಿಗೆಂದೇ ನಿಗದಿಯಾಗಿರುವ ಯೋಜನೆಗಳಿಗೆ 28,600 ಕೋಟಿ ರೂ. ಒದಗಿಸಲಾಗುವುದು.

ಜಿಡಿಪಿ: 2020-21ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 10% ಎಂದು ಅಂದಾಜಿಸಲಾಗಿದೆ. 2020-21ರಲ್ಲಿ ಆದಾಯ 22.46 ಲಕ್ಷ ಕೋಟಿ, ವೆಚ್ಚ 30.42 ಲಕ್ಷ ಕೋಟಿ ಎಂದು ನಿಗದಿಸಲಾಗಿದೆ. 2020ರ ಆರ್ಥಿಕ ವರ್ಷಕ್ಕೆ ಪರಿಷ್ಕೃತ ಅಂದಾಜು ವೆಚ್ಚ 26.99 ಲಕ್ಷ ಕೋಟಿ ಮತ್ತು ಆದಾಯ 19.32 ಲಕ್ಷ ಕೋಟಿ ಎಂದು ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News