ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ 30,000 ಕೋ.ರೂ.
ಹೊಸದಿಲ್ಲಿ,ಫೆ.1: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2020-21ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ 30,000 ಕೋ.ರೂ.ಗಳನ್ನು ಮೀಸಲಿರಿಸಿದ್ದು,ಇದು ಕಳೆದ ಸಾಲಿನ ಮುಂಗಡ ಪತ್ರಕ್ಕೆ ಹೋಲಿಸಿದರೆ ಶೇ.14ರಷ್ಟು ಅಧಿಕವಾಗಿದೆ. ಈ ಪೈಕಿ 20,532.38 ಕೋ.ರೂ.ಗಳ ಸಿಂಹಪಾಲು ಅಂಗನವಾಡಿ ಸೇವೆಗಳಿಗಾಗಿ ಮೀಸಲಾಗಿದೆ. 2019-20ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ 26,184 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು.
ಪೋಷಣೆ,ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಒಳಗೊಂಡಿರುವ ಸಾಮಾಜಿಕ ಸೇವೆಗಳ ಕ್ಷೇತ್ರಕ್ಕೆ 4036.49 ಕೋ.ರೂ.,ಆರು ವರ್ಷಗಳ ಒಳಗಿನ ಮಕ್ಕಳಲ್ಲಿ ಕುಬ್ಜತೆಯನ್ನು ತಡೆಯುವ ಉದ್ದೇಶದ ಪೋಷಣ್ ಅಭಿಯಾನಕ್ಕೆ 3,700 ಕೋ.ರೂ.,ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾಚಾರದಿಂದ ಪೀಡಿತ ಮಹಿಳೆಯರಿಗೆ ವಿವಿಧ ಸೇವೆಗಳನ್ನು ಒದಗಿಸುವ ‘ಒನ್ ಸ್ಟಾಪ್ ಸೆಂಟರ್’ಗೆ 385 ಕೋ.ರೂ.,ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ 2,500 ಕೋ.ರೂ.,ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳಡಿ ಮಕ್ಕಳ ರಕ್ಷಣಾ ಸೇವೆಗಳ ಕಾರ್ಯಕ್ರಮಕ್ಕೆ 1,500 ಕೋ.ರೂ.,ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಗೆ 220 ಕೋ.ರೂ.,ಮಹಿಳಾ ಶಕ್ತಿ ಕೇಂದ್ರಗಳಿಗೆ 100 ಕೋ.ರೂ.,ರಾಷ್ಟ್ರೀಯ ತೊಟ್ಟಿಲು ಯೋಜನೆಗೆ 75 ಕೋ.ರೂ., ಉದ್ಯೋಗಿ ಮಹಿಳೆಯರ ಹಾಸ್ಟೆಲ್ ಯೋಜನೆಗೆ 150 ಕೋ.ರೂ.,ಮಹಿಳೆಯರ ಕಳ್ಳಸಾಗಣೆ ತಡೆ,ರಕ್ಷಣೆ ಮತ್ತು ಪುನರ್ವಸತಿ ಉದ್ದೇಶದ ಉಜ್ವಲಾ ಯೋಜನೆಗೆ 30 ಕೋ.ರೂ. ಮತ್ತು ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಅಭಿಯಾನಕ್ಕೆ 1,163 ಕೋ.ರೂ.ಗಳನ್ನು ನಿಗದಿಗೊಳಿಸಲಾಗಿದೆ.
ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಒಟ್ಟು 29720.38 ಕೋ.ರೂ.ಗಳು ಹಂಚಿಕೆಯಾಗಿದ್ದು,ಇದು ಕಳೆದ ಆರ್ಥಿಕ ಸಾಲಿನಲ್ಲಿ ಹಂಚಿಕೆ ಮಾಡಲಾಗಿದ್ದ ಮೊತ್ತಕ್ಕಿಂತ 3,804 ಕೋ.ರೂ.ಅಧಿಕವಾಗಿದೆ.