ದೀರ್ಘಾವಧಿಯಲ್ಲಿ ಆದಾಯ ತೆರಿಗೆ ವಿನಾಯಿತಿಗಳ ರದ್ದತಿ ಸರಕಾರದ ಉದ್ದೇಶ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ,ಫೆ.1: ಕೇಂದ್ರ ಮುಂಗಡಪತ್ರದಲ್ಲಿ ವಿನಾಯಿತಿಗಳು ಮತ್ತು ಕಡಿತಗಳನ್ನು ತ್ಯಜಿಸುವ ಷರತ್ತಿನೊಂದಿಗೆ ವೈಯಕ್ತಿಕ ಆದಾಯ ತೆರಿಗೆ ದರಗಳಲ್ಲಿ ಇಳಿಕೆಯನ್ನು ಪ್ರಕಟಿಸಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ದೀರ್ಘಾವಧಿಯಲ್ಲಿ ಎಲ್ಲ ಆದಾಯ ತೆರಿಗೆ ವಿನಾಯಿತಿಗಳು ಮತ್ತು ಕಡಿತಗಳನ್ನು ಹಿಂದೆಗೆದುಕೊಳ್ಳುವುದು ಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಶನಿವಾರ ಲೋಕಸಭೆಯಲ್ಲಿ ಬಜೆಟ್ ಮಂಡನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಲಾಗಿತ್ತು. ಈಗ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಇಳಿಸಲಾಗಿದೆ ಎಂದರು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಅಗತ್ಯವಾದಾಗ ಹೆಚ್ಚುವರಿ ಬಂಡವಾಳವನ್ನು ಒದಗಿಸಲಾಗುವುದು ಎಂದೂ ಅವರು ತಿಳಿಸಿದರು.
ಆದಾಯ ಸೃಷ್ಟಿಯಲ್ಲಿ ಸುಧಾರಣೆಯಾಗಿರುವುದು ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಈಗಿನ ಜಿಡಿಪಿಯ ಶೇ.3.8ರಿಂದ ಶೇ.3.5ಕ್ಕೆ ಇಳಿಸಲು ಸಾಧ್ಯವಾಗುತ್ತದೆ ಎಂಬ ಆಶಯವನ್ನು ಮೂಡಿಸಿದೆ ಎಂದರು.
ಮುಂದಿನ ಕೆಲವು ತಿಂಗಳುಗಳಲ್ಲಿ ಬೃಹತ್ ಹೂಡಿಕೆ ಹಿಂದೆಗೆತಗಳು ನಡೆಯಲಿವೆ ಮತ್ತು ಮುಂದಿನ ಹಣಕಾಸು ವರ್ಷಕ್ಕೆ ನಿಗದಿಗೊಳಿಸಲಾಗಿರುವ 2.10 ಲ.ಕೋ.ರೂ.ಗಳ ಗುರಿಯನ್ನು ಸಾಧಿಸುವ ಭರವಸೆ ತನಗಿದೆ ಎಂದು ಹೂಡಿಕೆ ಹಿಂದೆಗೆತ ಕಾರ್ಯದರ್ಶಿ ಟಿ.ಕೆ.ಪಾಂಡೆ ಅವರು ತಿಳಿಸಿದರು.