ಸಿಎಎ ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳು: ಕೋರ್ಟ್ ಗಳಲ್ಲಿ ಪೊಲೀಸರಿಗೆ ಹಿನ್ನಡೆ

Update: 2020-02-01 15:26 GMT
file photo

ಹೊಸದಿಲ್ಲಿ,ಫೆ.1: ಉತ್ತರ ಪ್ರದೇಶದಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಮತ್ತು ಹೋರಾಟಗಾರರ ಬಂಧನಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸ್ಥಳೀಯ ನ್ಯಾಯಾಲಯಗಳಲ್ಲಿ ಪೊಲೀಸರಿಗೆ ತೀವ್ರ ಹಿನ್ನಡೆಯುಂಟಾಗುತ್ತಿದೆ.

  ಜ.24ರಂದು ಬಿಜ್ನೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜೀವ ಪಾಂಡೆ ಅವರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳ ಸಂದರ್ಭ ದಂಗೆ ಮತ್ತು ಕೊಲೆ ಯತ್ನ ಪ್ರಯತ್ನದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರು ವ್ಯಕ್ತಿಗಳಿಗೆ ಜಾಮೀನು ಮಂಜೂರು ಮಾಡಿದ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯ ಪೊಲೀಸರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.

ಘಟನಾ ಸ್ಥಳದಿಂದ ಇಮ್ರಾನ್ ಎಂಬಾತನನ್ನು ಮಾತ್ರ ಬಂಧಿಸಲಾಗಿದ್ದು,ಇತರ ಆರೋಪಿಗಳನ್ನು ಬಂಧಿಸಿಲ್ಲ. ಕಲ್ಲು ತೂರಾಟದಿಂದ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಆದರೆ ಅದಕ್ಕೆ ಯಾವುದೇ ಸಾಕ್ಷ್ಯಾಧಾರವನ್ನು ಒದಗಿಸಿಲ್ಲ. ಆರೋಪಿಗಳು ಅಂಗಡಿಗಳನ್ನು ಧ್ವಂಸಗೊಳಿಸುವ ಅಥವಾ ಮನೆಗಳಿಗೆ ಬೆಂಕಿ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು ಎಂದು ಕೇಸ್ ಡೈರಿಯಲ್ಲಿ ಪೊಲೀಸರು ತೋರಿಸಿದ್ದಾರೆ. ಆದರೆ ಇದಕ್ಕೂ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೆ ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತೋರಿಸಿದ್ದಾರೆ,ಆದರೆ ಆರೋಪಿಗಳಿಂದ ಯಾವುದೇ ಶಸ್ತ್ರವನ್ನು ವಶಪಡಿಸಿಕೊಂಡಿರುವುದನ್ನು ತೋರಿಸಿಲ್ಲ ಎಂದು ಹೇಳುವ ಮೂಲಕ ಪ್ರಕರಣದಲ್ಲಿಯ ಲೋಪಗಳನ್ನು ನ್ಯಾಯಾಧೀಶರು ಬೆಟ್ಟು ಮಾಡಿದ್ದರು.

ಬಿಜ್ನೂರ್ ಪ್ರತಿಭಟನೆ ಸಂದರ್ಭ ಹೆಚ್ಚಿನ ಹಿಂಸಾಚಾರ ನಡೆದ ಜಿಲ್ಲೆಯಾಗಿದ್ದು,ಪೊಲೀಸರು 100ಕ್ಕೂ ಅಧಿಕ ಜನರನ್ನು ಬಂಧಿಸಿದ್ದರು.

ಜ.17ರಂದು ಇಂತಹುದೇ ಪ್ರಕರಣದಲ್ಲಿ ಹಿಂಸಾಚಾರದ ಆರೋಪದಲ್ಲಿ ಬಂಧಿತ 13 ಜನರಿಗೆ ಬುಲಂದಶಹರ್ ನ್ಯಾಯಾಲಯವು ಜಾಮೀನು ನೀಡಿದೆ.

ಆರೋಪಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿಲ್ಲ. 15 ಗಂಟೆಗಳ ನಂತರ ಎಫ್‌ಐಆರ್ ದಾಖಲಾಗಿದೆ ಮತ್ತು ಆತನನ್ನು ಸುಳ್ಳೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆತ ಘಟನಾ ಸ್ಥಳದಲ್ಲಿ ಇರಲೂ ಇಲ್ಲ ಎಂದು ನ್ಯಾಯಾಲಯವು ಓರ್ವ ಆರೋಪಿಯ ಜಾಮೀನು ಆದೇಶದಲ್ಲಿ ತಿಳಿಸಿದೆ.

ಅಮಾಯಕರ,ವಿಶೇಷವಾಗಿ ಮುಸ್ಲಿಮರ ವಿರುದ್ಧ ಎಫ್‌ಐಆರ್ ದಾಖಲಿಸುವ ಪೊಲೀಸರ ಈ ಪ್ರವೃತ್ತಿಯನ್ನು ‘ಪೀಪಲ್ಸ್ ಟ್ರಿಬ್ಯೂನಲ್ ಆನ್ ಸ್ಟೇಟ್ ಆ್ಯಕ್ಷನ್ (ಪಿಟಿಎಸ್‌ಎ) ’ಕೂಡ ಬೆಟ್ಟು ಮಾಡಿದೆ. ಉ.ಪ್ರ.ಪೊಲೀಸರು ಮುಸ್ಲಿಮ್ ಸಮುದಾಯ ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ವ್ಯಾಪಕ ಹಿಂಸಾಚಾರವನ್ನು ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗದಿದ್ದವರನ್ನೂ ಅವರು ಬಿಟ್ಟಿಲ್ಲ. ಅಮಾಯಕ ವ್ಯಕ್ತಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹಲವಾರು ಗಣ್ಯರನ್ನು ಜ್ಯೂರಿಗಳನ್ನಾಗಿ ಹೊಂದಿರುವ ಪಿಟಿಎಸ್‌ಎ ಹೇಳಿದೆ.

ತನ್ಮಧ್ಯೆ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಆಸ್ತಿನಾಶದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವವರ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಆಡಳಿತದ ಕ್ರಮದ ವಿರುದ್ಧ ಪ್ರಶ್ನಿಸಲಾಗಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಉ.ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ಶುಕ್ರವಾರ ನೋಟಿಸ್ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News