ಪ್ರಗತಿಪರ ಚಿಂತನೆಯೊಂದಿಗೆ ಕ್ರಿಯಾಯೋಜನೆ ಆಧಾರಿತ ಬಜೆಟ್ : ಐಸಾಕ್ ವಾಝ್

Update: 2020-02-01 18:16 GMT

ಮಂಗಳೂರು : ಪ್ರಗತಿಪರ ಚಿಂತನೆಯೊಂದಿಗೆ ಕ್ರಿಯಾಯೋಜನೆ ಆಧಾರಿತ ಬಜೆಟ್ ಇದಾಗಿದೆ. ಆರ್ಥಿಕ ಅಭಿವೃದ್ಧಿ, ನವಭಾರತದ ಆಶೋತ್ತರ ಪೂರೈಸಲು ಕೈಗೊಂಡಿರುವ ಪೂರಕ ಕ್ರಮ ದೇಶದ ಪ್ರಗತಿಗೆ ನೆರವಾಗಬಲ್ಲುದು. ಎಂಎಸ್‌ಎಂಇ ಮತ್ತು ಸ್ಟಾರ್ಟ್ ಆ್ಯಪ್‌ಗಳಿಗೆ ಕೇಂದ್ರೀಕೃತ ಹೂಡಿಕೆ ಕ್ಲೀಯರೆನ್ಸ್ ಸೆಲ್, ನ್ಯಾಶನಲ್ ಕೋಲ್ಡ್ ಸ್ಟೋರೇಜ್ ಸಪ್ಲೈಚೈನ್, ಸಮುದ್ರ ಮೀನುಗಾರಿಕೆಗೆ ಅಭಿವೃದ್ಧಿಗೆ ರೂಪುರೇಷೆ, ಇ ಲಾಜಿಸ್ಟಿಕ್ಸ್ ಮಾರ್ಕೆಟ್, ರಾಷ್ಟ್ರೀಯ ಎಕ್ಸ್‌ಪ್ರೆಸ್ ವೇ ಮತ್ತು ಹೆದ್ದಾರಿ ಅಭಿವೃದ್ಧಿ ಜಾಲ, ಮೊಬೈಲ್ ಮತ್ತು ಇಲೆಕ್ಟ್ರಾನಿಕ್ಸ್ ಸರಕು ಮಾರುಕಟ್ಟೆಗೆ ಮೇಕ್ ಇನ್ ಇಂಡಿಯಾ ಯೋಜನೆ, ರಾಷ್ಟ್ರೀಯ ಗ್ಯಾಸ್ ಗ್ರಿಡ್, ಡಾಟಾ ಸೆಂಟರ್ ಪಾರ್ಕ್ ಮತ್ತು ಹೊಸ ಟೆಕ್ ವ್ಯವಹಾರ ಸಪೋರ್ಟ್ ಸೆಂಟರ್, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಲಸ್ಟರ್, ನವೀಕರಿಸಬಹುದಾದ ಇಂಧನ ವಲಯಕ್ಕೆ 20,000 ಕೋ.ರೂ., ಭಾರತ್ ನೆಟ್ ಇಂಟರ್‌ನೆಟ್ ಸಂಪರ್ಕಕ್ಕೆ 6,000 ಕೋ.ರೂ. ನೀಡಿರುವುದು ಕರಾವಳಿಯ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಕ್ಕೆ ನೆರವಾಗಲಿದೆ. ಒಟ್ಟಿನಲ್ಲಿ ಇದೊಂದು ಜನಪರ ಬಜೆಟ್ ಎಂದು ಕೆಸಿಸಿಐ ಮಂಗಳೂರು ಅಧ್ಯಕ್ಷ ಐಸಾಕ್ ವಾಝ್ ತಿಳಿಸಿದ್ದಾರೆ.

''ಕೃಷಿ ಭೂಮಿಯನ್ನು ಸುಲಭವಾಗಿ ಕಾರ್ಪೊರೇಟ್ ವಲಯಕ್ಕೆ ಅನುಕೂಲವಾಗುವ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಈ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಈ ಹಿಂದಿನಿಂದಲೂ ರೈತರನ್ನು ಕಡೆಗಣಿಸುವ ಚಾಳಿಯನ್ನು ಮುಂದಿವರಿಸಿರುವ ಕೇಂದ್ರವು ಭವಿಷ್ಯದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ. ಜನರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿಯ ಹೆಚ್ಚಳವನ್ನು ಕಾಣಿಸದೆ ಅಭಿವೃದ್ಧಿ ಪರ ಯೋಜನೆಯಲ್ಲಿ ಮಂಕುಬೂದಿ ಎರಚುವ ಪ್ರಯತ್ನ ಇದಾಗಿದೆ. ಪೆಟ್ರೋಲ್, ವಾಹನ ಮುಂತಾದವುಗಳ ಬೆಲೆ ಏರಿಸುವ ಮುಖಾಂತರ ಮಧ್ಯಮ ವರ್ಗಕ್ಕೂ ಹೊಡೆತ ಬೀಳುವಂತಾಗಿದೆ. ಈ ಬಜೆಟ್‌ನಿಂದ ಅನಾನುಕೂಲವೇ ಹೊರತು ಪ್ರಗತಿಗೆ ಪೂರಕವಾದ ಅಂಶಗಳನ್ನು ಪ್ರಕಟಿಸುವ ಧೈರ್ಯ ತೋರಲಿಲ್ಲ. ಒಟ್ಟಿನಲ್ಲಿ ಇದೊಂದು ದೂರದೃಷ್ಟಿತ್ವರಹಿತ ಬಜೆಟ್''.

- ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯರು, ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ

''ಜನತೆಯ ಆಶೋತ್ತರಗಳಿಗೆ ಪೂರಕವಾದ ಜನಪರ ಬಜೆಟ್ ಇದಾಗಿದೆ. ದೇಶದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಾಳಜಿ ಈ ಬಜೆಟ್‌ನಲ್ಲಿ ಅಡಕವಾಗಿದೆ. ಕೃಷಿ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ, ಮೀನುಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಿರುವುದು ಗಮನಾರ್ಹ ಅಂಶ''.
- ಸುದರ್ಶನ ಎಂ. ಅಧ್ಯಕ್ಷರು, ದ.ಕ.ಜಿಲ್ಲಾ ಬಿಜೆಪಿ

''ಸಿಎಎ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಈ ಸಂದರ್ಭ ಶೇ.60ಕ್ಕೂ ಹೆಚ್ಚು ಸಂಖ್ಯೆಯ ಅಲ್ಪಸಂಖ್ಯಾತರು, ದಲಿತರು, ಅದಿವಾಸಿಗಳು ಮತ್ತು ಕಾಗದ ಪತ್ರ ಇಲ್ಲದ ಬಡವರಿಗೆ ಸಿಗಬೇಕಾದ ಭರವಸೆಯು ಈ ಬಜೆಟ್‌ನಲ್ಲಿಲ್ಲದಿರುವುದು ಸರಕಾರ ಸಂವೇದನಾಶೀಲತೆ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ದೇಶವನ್ನು ವಿನಾಶದಡೆಗೆ ನೂಕುವ ಸೂಚನೆಯೂ ಇದಾಗಿದೆ. ಈಗಿನ ಭೀತಿ ಮತ್ತು ಆತಂಕದ ವಾತಾವರಣದಲ್ಲಿ ಬಜೆಟ್‌ನ ಮೂಲಕ ವಿಶ್ವಾಸ ಹುಟ್ಟಿಸುವ ಸಂದೇಶ ರವಾನೆಯಾಗದಿರುವುದು ಅತ್ಯಂತ ಶೋಚನೀಯ. ಇದೊಂದು ಒಳನೋಟಗಳಿಲ್ಲದ ಪ್ರಗತಿಶೂನ್ಯ ಬಜೆಟ್. ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆಯ ಬಗ್ಗೆ ನಿಖರ ಯೋಜನೆಯ ಪ್ರಸ್ತಾಪವೇ ಇಲ್ಲ. ದೇಶದ ಆರ್ಥಿಕ ದುಸ್ಥಿತಿಗೆ ಆಗಬೇಕಾದ ದೊಡ್ಡ ಮಟ್ಟದ ಸರ್ಜರಿಯೂ ಕಾಣಿಸಲಿಲ್ಲ''.

ಪಿವಿ ಮೋಹನ್, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

''ಎಪಿಎಂಸಿಯಲ್ಲಿ ಮೂಲ ಬದಲಾವಣೆ ತಂದಿರುವುದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ. ವಿದೇಶಿ ಬಂಡವಾಳ ಹರಿದು ಬರಲು ಉತ್ತೇಜನ ನೀಡಲಾಗಿದೆ. ಹಿರಿಯ ನಾಗರಿಕರ ಅಭಿವೃದ್ಧಿಗಾಗಿ 9500 ಕೋ.ರೂ. ಮೀಸಲಿಟ್ಟಿರುವುದು ಮತ್ತು ರಾಜ್ಯಕ್ಕೆ ಬರಬೇಕಾಗಿದ್ದ 24 ಸಾವಿರ ಕೋ.ರೂ. ಜಿಎಸ್‌ಟಿಯನ್ನು ಎರಡು ಕಂತಿನಲ್ಲಿ ಪಾವತಿಸಲು ನಿರ್ಧರಿಸಿರುವುದು ಶ್ಲಾಘನೀಯ''.

- ಅಹ್ಮದ್ ಬಾವಾ ಪಡೀಲ್, ಮಾಜಿ ಸದಸ್ಯರು, ಎಪಿಎಂಸಿ-ಮಂಗಳೂರು

''ಕೇಂದ್ರ ಮತ್ತು ರಾಜ್ಯ ಸರಕಾರದ ಕೆಲವೊಂದು ನೀತಿ-ನಿಯಮದಿಂದ ಮೀನುಗಾರರ ಬದುಕು ಅತಂತ್ರವಾಗಿದೆ. ಹವಾಮಾನ ವೈಪರಿತ್ಯದ ಮಧ್ಯೆ ಸರಕಾರದ ಅನೀತಿ ಕೂಡ ಮೀನುಗಾರಿಕಾ ಬೋಟುಗಳು ಕಡಲಿಗೆ ಇಳಿಯದಂತಹ ಸ್ಥಿತಿ ಎದುರಾಗಿದೆ. ಈ ಮಧ್ಯೆ ಶನಿವಾರ ಮಂಡಿಸ ಲಾದ ಬಜೆಟ್‌ನಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ಅಂಶಗಳೇ ಇಲ್ಲ. ಹಳೆಯ ಹೇಳಿಕೆಗಳನ್ನು ಪುನರಾವರ್ತನೆ ಮಾಡಲಾಗಿದೆ''.

- ಅಲಿ ಹಸನ್, ಅಧ್ಯಕ್ಷರು, ದ.ಕ. ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ

''ಈ ಬಜೆಟ್‌ನಲ್ಲಿ ಗ್ರ್ರಾಮೀಣಾಭಿವೃದ್ಧಿಗೆ ದಾಖಲೆಯ ಅನುದಾನ ಮೀಸಲಿಟ್ಟಿದೆ. ಕಾಶ್ಮೀರದ ಅಭಿವೃದ್ಧಿ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ಶ್ಲಾಘನೀಯ. ಬರಪೀಡಿತ ಜಿಲ್ಲೆಗಳಲ್ಲಿ ನೀರಿನ ಮರುಪೂರಣಕ್ಕೆ ಯೋಜನೆ, ಆಯುಷ್ಮಾನ್ ಆಸ್ಪತ್ರೆಗಳ ನಿರ್ಮಾಣ ವಿಶಿಷ್ಟ ಯೋಜನೆಗಳಾಗಿವೆ. ದೇಶದ ಸರ್ವತೋಮುಖ ಪ್ರಗತಿಗೆ ಈ ಬಜೆಟ್ ನೆರವಾಗಲಿದೆ. ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಇದರ ಫಲ ತಲುಪಲಿದೆ''.

- ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವರು, ದ.ಕ.ಜಿಲ್ಲೆ

''ಆರ್ಥಿಕತೆಯನ್ನು ಸಧೃಡಗೊಳಿಸುವ, ಬಡವರ್ಗದ ಆರೋಗ್ಯ ರಕ್ಷಣೆಗೆ ಒತ್ತು ನೀಡುವ, ಯುವ ಕೈಗಳಿಗೆ ಹೆಚ್ಚಿನ ಉದ್ಯೋಗ ನೀಡುವ ಜನಪರ ಬಜೆಟ್ ಇದಾಗಿದೆ. ರೈತರಿಗೆ 16 ಅಂಶಗಳ ಪ್ರಗತಿ ಸೂತ್ರ, ವಿಶ್ವದಾದ್ಯಂತ ಆರ್ಥಿಕ ಹಿಂಜರಿತವಿದ್ದರೂ ಈ ಬಜೆಟ್‌ನಿಂದ ದೇಶದ ಆರ್ಥಿಕತೆಗೆ ಹೆಚ್ಚಿನ ಹಣದ ಹರಿವು ಬರಲಿದೆ. ಕೈಗಾರಿಕಾ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. 500 ಮೀನು ಉತ್ಪಾದಕರ ಸಂಘ ಸ್ಥಾಪಯಿಂದ ಕರಾವಳಿಯ ಮೀನುಗಾರರಿಗೆ ಅನುಕೂಲವಾಗಲಿದೆ''.

- ಡಾ.ಭರತ್ ಶೆಟ್ಟಿ ವೈ, ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ

''ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವುದೇ ಒತ್ತು ನೀಡಿಲ್ಲ. ಶೈಕ್ಷಣಿಕ ಕ್ಷೇತ್ರಕ್ಕೆ ಸಾಲ ತಂದು ವಿದ್ಯೆ ನೀಡುವ ಯೋಜನೆ ಹಾಸ್ಯಾಸ್ಪದ ವಾಗಿದೆ. ಜನಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಿಲ್ಲ. ತೀವ್ರ ಸಂಕಷ್ಟದಲ್ಲಿರುವ ಕೈಗಾರಿಕಾ, ಉದ್ಯಮ ಕ್ಷೇತ್ರ ಮೇಲಕ್ಕೆತ್ತಲೂ ಬಜೆಟ್ ವಿಫಲವಾಗಿದೆ''.

- ಯು.ಟಿ. ಖಾದರ್, ಶಾಸಕರು, ಮಂಗಳೂರು ವಿಧಾನ ಸಭಾ ಕ್ಷೇತ್ರ

''ರಾಷ್ಟ್ರೀಯ ಶಿಕ್ಷಣ ನೀತಿಯ ಅಪಾಯಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಶಿಕ್ಷಣ ಕ್ಷೇತ್ರವನ್ನು ಫ್ಯಾಸಿಸಂನ ಹತ್ತಿರ ಕೊಂಡೊಯ್ಯುವ ಲಕ್ಷಣಗಳು ಈ ಬಜೆಟ್‌ನಲ್ಲಿ ಗೋಚರಿಸುತ್ತಿವೆ.ಎನ್ ಇಪಿ ಜಾರಿಗೊಳಿಸುವ ಘೋಷಣೆಯನ್ನು ಒಪ್ಪಲು ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಎಫ್‌ಡಿಐ ತರುವುದರ ಮೂಲಕ ಖಾಸಗೀಕರಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣ ದಿಂದ ವಂಚಿತರಾಗುವ ಸಾಧ್ಯತೆ ಇದೆ. ಇದು ಫ್ಯಾಸಿಸಮ್ ಮತ್ತು ಕಾರ್ಪೊರೇಟ್‌ಗಳ ಮಧ್ಯೆ ಕೊಡು-ಕೊಳ್ಳುವಿಕೆಯ ಸಂಬಂಧವಿರಿಸಿ ಕೊಂಡಂತಿದೆ. ದೇಶದಲ್ಲಿ ಫ್ಯಾಸಿಸಮ್ ಅತ್ಯುನ್ನತ ಘಟ್ಟದಲ್ಲಿ ರಾರಾಜಿಸುತ್ತಿರುವಾಗ ಅವರನ್ನೇ ಓಲೈಸುವಂತಹ ಬಜೆಟ್ ಇದಾಗಿದೆ.

- ಫಯಾಝ್ ದೊಡ್ಡಮನೆ, ಸಿಎಫ್‌ಐ, ಕರ್ನಾಟಕ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News