ಮಂಗಳೂರು ವಿವಿಯಲ್ಲಿ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ ಉದ್ಘಾಟನೆ

Update: 2020-02-02 10:04 GMT

ಕೊಣಾಜೆ: ಪ್ರದರ್ಶನ ಕಲೆಗಳಲ್ಲಿ ಯಕ್ಷಗಾನವು ಅತ್ಯಂತ ಶ್ರೀಮಂತವಾದ ಕಲೆಯಾಗಿದೆ. ಯಕ್ಷಗಾನದಲ್ಲಿ ಕುಣಿತ, ಹಾಡುಗಾರಿಕೆ, ಅಭಿನಯ, ವೇಷಭೂಷಣ, ಬಣ್ಣಗಾರಿಕೆ ಎಲ್ಲವೂ ಇದ್ದು, ಬಣ್ಣಗಾರಿಕೆಗೂ ವಿಶೇಷವಾದ ಮಹತ್ವವಿದೆ. ಇಂತಹ ಶಿಬಿರದಲ್ಲಿ ಬಣ್ಣಗಾರಿಕೆಯ  ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶನಿವಾರ ಯಕ್ಷಗಾನ ಕೇಂದ್ರದಲ್ಲಿ ನಡೆದ ಒಂದು ದಿನದ ಬಣ್ಣಗಾರಿಕೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನದ ಬೆಳವಣಿಗೆಗಾಗಿ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆ ಯುತ್ತಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆಗಾರಿಕೆಯ ತರಬೇತಿಯೊಂದಿಗೆ ಯಕ್ಷಗಾನದ ಬಣ್ಣಗಾರಿಕೆಯ ಅರಿವನ್ನು ಕೂಡಾ ಇಂತಹ ಕಮ್ಮಟದ ಮೂಲಕ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು, ಯಕ್ಷಗಾನ ಅಧ್ಯಯನ ಕೇಂದ್ರವು ಈಗಾಗಲೇ ಯಕ್ಷಗಾನಕ್ಕೆ ಸಂಬಂಧಸಿದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆಯ ಬಗ್ಗೆಯೂ ಅರಿವು ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಿ ಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಯಕ್ಷಗಾನ ಕಲಾವಿದರಾದ ಹರಿನಾರಾಯಣ ಭಟ್ ಹಾಗೂ ಜನಾರ್ದನ ಅವರು ಭಾಗವಹಿಸಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ, ಸ್ವಾತಿ ರಾವ್ ಅವರು ಉಪಸ್ಥಿತರಿದ್ದರು. ಯಕ್ಷಮಂಗಳ ವಿದ್ಯಾರ್ಥಿಗಳಾದ ಮುಖೇಶ್ ಸ್ವಾಗತಿಸಿ, ಪುರುಷೋತ್ತಮ ವಂದಿಸಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News