ನಾವು ವಿಶ್ವಾಸದಲ್ಲಿ ಕ್ರೈಸ್ತರಾಗಿದ್ದು ಸಂಸ್ಕೃತಿಯಲ್ಲಿ ಭಾರತೀಯರಾಗಿದ್ದೇವೆ : ಅ.ವಂ.ಡಾ.ಲಾರೆನ್ಸ್ ಮುಕ್ಕುಯಿ

Update: 2020-02-02 14:25 GMT

ಬೆಳ್ತಂಗಡಿ : ಭಾರತೀಯರಾದ ನಾವು ವಿಶ್ವಾಸದಲ್ಲಿ ಕ್ರೈಸ್ತರಾಗಿದ್ದು ಸಂಸ್ಕೃತಿಯಲ್ಲಿ ಭಾರತೀಯರಾಗಿದ್ದೇವೆ, ದೇಶವನ್ನು ಪ್ರೀತಿಸಿ ಅದನ್ನು ಕಟ್ಟುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ, ಮತಾಂತರ ಮಾಡುವುದು ನಮ್ಮ ಗುರಿಯಲ್ಲ ಸೇವೆಯೇ ಕ್ರೈಸ್ತ ಸಮುದಾಯದ ಗುರಿಯಾಗಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಡಾ ಲಾರೆನ್ಸ್ ಮುಕ್ಕುಯಿ ಹೇಳಿದರು.

ಅವರು ಮಡಂತ್ಯಾರಿನಲ್ಲಿ ರವಿವಾರ ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಸಭಾ, ಕಥೋಲಿಕ್ ಯುವ ಸಂಚಲನ ಹಾಗೂ ಕಥೋಲಿಕ್ ಸ್ತ್ರೀ ಸಂಘಟನೆಗಳ ನೇತೃತ್ವದಲ್ಲಿ ನಡೆದ ಮಂಗಳೂರು, ಬೆಳ್ತಂಗಡಿ, ಹಾಗೂ ಪುತ್ತೂರು ಧರ್ಮಪ್ರಾಂತ್ಯಗಳ ಸಹಭಾಗಿತ್ವದಲ್ಲಿ ನಡೆದ ಕಥೋಲಿಕ್ ಮಹಾ ಸಮಾವೇಶ 2020 ರಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಕ್ರೈಸ್ತ ಸಮುದಾಯ ಈ ನಾಡಿನ ಎಲ್ಲರಿಗೂ ಒಳ್ಳೆಯ ಶಿಕ್ಷಣ, ಆರೋಗ್ಯ ಹಾಗೂ ಇತರೆ ಸೇವೆಗಳನ್ನು ನೀಡಲು ಮುಂದಾಗಿದೆಯೇ ಹೊರತು ಎಂದೂ ಮತಾಂತರ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿಲ್ಲ, ಕರಾವಳಿಯಲ್ಲಿನ ಕ್ರೈಸ್ತ ಸಮುದಾಯವನ್ನು ನೋಡಿದರೆ ಇದನ್ನು ತಿಳಿಯಲು ಸಾಧ್ಯ. ಭಾರತದಲ್ಲಿ ಕ್ರೈಸ್ತ ಧರ್ಮಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ನಾವು ಈ ನೆಲದ ಮಕ್ಕಳಾಗಿದ್ದೇವೆ, ನಮ್ಮ ಭಾರತೀಯತೆ, ಅಸ್ತಿತ್ವ, ನಂಬಿಕೆ ಕಾರ್ಯಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದರು.

ಸತ್ಯ, ಧರ್ಮ, ನ್ಯಾಯದ ನೆಲೆಯಲ್ಲಿ ದೇಶವನ್ನು ಕಟ್ಟುವ ಕಾರ್ಯವನ್ನು ಮಾಡಬೇಕಾಗಿದೆ. ವಿಭಜಿಸುವ ಶಕ್ತಿಗಳಿಗೆ ಎಂದೂ ಬೆಂಬಲ ನೀಡಬಾರದು, ಸಾಮಾಜಿಕವಾಗಿ ರಾಜಕೀಯವಾಗಿ ಕ್ರೈಸ್ತ ಸಮುದಾಯಕ್ಕೆ ಸೂಕ್ತ ಮನ್ನಣೆಯನ್ನು ನೀಡುವಂತಾಗಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ಧರ್ಮಪ್ರಾಂತ್ಯದ ಧಮಾಧ್ಯಕ್ಷರಾದ ಅ. ವಂ ಡಾ ಪೀಟರ್ ಪಾವ್ಲ್ ಸಲ್ದಾನ ಮಾತನಾಡಿ ದೇಶವನ್ನು, ಸಮಾಜವನ್ನು ಒಗ್ಗೂಡಿಸುವುದು ದೇವರ ಕೆಲಸವಾಗಿದೆ, ವಿಭಜಿಸುವ ಕಾರ್ಯ ಎಂದಿಗೂ ಧರ್ಮದ ಕೆಲಸವಲ್ಲ, ನಾವು ಎಂದಿಗೂ ಭಾರತ ಸತ್ಪ್ರಜೆಗಳಾಗಿ ನಮ್ಮ ಸಂವಿಧಾನವು ನೀಡುವ ಆಶಯಗಳಿಗೆ ಅನುಗುಣವಾಗಿ ದೇಶ ಕಟ್ಟುವ ಕಾರ್ಯವನ್ನು ಮಾಡುವವರಾಗಿದ್ದೇವೆ ಎಂದರು.

ದೇಶದ ಪ್ರಜೆಗಳ ಸೇವೆ ಮಾಡಿದವರನ್ನು ಪೂಜನೀಯ ಭಾವನೆಯಿಂದ ನೋಡದೆ ಅನುಮಾನದಿಂದ ನೋಡುವಂತಹ ಕಾರ್ಯ ನಡೆಯುತ್ತಿದೆ ಇದು ಸರಿಯಲ್ಲ. ಇಂದು ನಮ್ಮ ಹೃದಯಗಳಲ್ಲಿ ದ್ವೇಷದ ಭಾವನೆಗಳನ್ನು ಬಿತ್ತುವ ಪರಸ್ಪರ ವಿಭಜಿಸುವ ಕಾರ್ಯಗಳಿಗೆ ಕೆಲವು ಶಕ್ತಿಗಳು ಮುಂದಾಗುತ್ತಿವೆ, ಅಂತಹ ಶಕ್ತಿಗಳ ಬಗ್ಗೆ ದೇಶದ ಎಲ್ಲರೂ ಜಾಗರೂಕರಾಗಿರಬೇಕಾದ ಅಗತ್ಯವಿದೆ ಎಂದರು.

ಕರಾವಳಿಯ ಜಿಲ್ಲೆಯ ಅಭಿವೃದ್ಧಿಯಲ್ಲಿ ಹಾಗೂ ಕನ್ನಡ ತುಳು ಭಾಷೆಗಳ ಬೆಳವಣಿಗೆಯಲ್ಲಿ ಕ್ರೈಸ್ತ ಸಮುದಾಯ ನೀಡಿರುವ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಡಾ ಗೀವರ್ಗೀಸ್ ಮಾರ್‍ಮಕಾರಿಯೋಸ್ ಆಶೀರ್ವಚನ ನೀಡಿದರು. ಸಮಾವೇಶದಲ್ಲಿ ವಿಶ್ವ ಭೂಷಣ ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿವಾಸಿ ಉಧ್ಯಮಿ ರೊನಾಲ್ಡ್ ಕುಲಾಸೊ ಕ್ರೈಸ್ತ ಧರ್ಮದವರು ದೇಶದಲ್ಲಿ ಅತ್ಯಂತ ಸಣ್ಣ ಸಮುದಾಯವಾದರೂ ಅದು ನೀಡಿರುವ ಕೊಡುಗೆ ಅತ್ಯಂತ ಹಿರಿಯದಾಗಿದೆ. ಆದರೆ ಕ್ರೈಸ್ತರಿಗೆ ರಾಜಕೀಯವಾಗಿ ಸಾಮಾಜಿಕವಾಗಿ ಅವಕಾಶಗಳು ಸಿಗುವುದು ತುಂಬಾ ಕಡಿಮೆಯಾಗಿದೆ, ಕ್ರೈಸ್ತ ಯುವಕರು ಸಾಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಲು ಪ್ರಯತ್ನಿಸಬೇಕಾಗಿದೆ. ಇದೀಗ ಕೆಲ ಶಕ್ತಿಗಳು ಕ್ರೈಸ್ತರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸಮಾಜದಲ್ಲಿ ಅಶಾಂತಿಯನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಶಕ್ತಿಗಳ ಹೇಳಿಕೆಗಳಿಗೆ ನಾವು ಯಾವುದೇ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷರಾದ ಪೌಲ್ ರೋಲ್ಫಿ ಡಿಕೋಸ್ತ ವಹಿಸಿದ್ದರು. ವೇದಿಕೆಯಲ್ಲಿ ಮೂರೂ ಧರ್ಮ ಪ್ರಾಂತ್ಯಗಳ ವಿಕಾರ್ ಜನರಲ್‍ಗಳು, ಧರ್ಮಗುರುಗಳು ಇದ್ದರು. ಸಮಾವೇಶದ ಸಂಚಾಲಕರಾದ ಜೋಯಲ್ ಮೆಂಡೋನ್ಸ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದ ಕಾರ್ಯದರ್ಶಿ ವಾಲ್ಟರ್ ಮೋನಿಸ್ ವಂದಿಸಿದರು. ವಿವೇಕ್ ವಿ ಪಾಯಸ್ ಹಾಗೂ ಫ್ರಾನ್ಸೀಸ್ ವಿವಿ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಐವಾನ್ ಡಿಸೋಜ, ಕೆ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್ ಲೋಬೊ ಹಾಗೂ ಇತರ ಗಣ್ಯರು ಶುಭ ಹಾರೈಸಿದರು. ಸಮಾವೇಶದಲ್ಲಿ ಯುವಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಮಡಂತ್ಯಾರು ಪೇಟೆಯಿಂದ ಆಕರ್ಷಕ ಮೆರವಣಿಗೆ ನಡೆಯಿತು ಮೆರವಣಿಗೆಗೆ ಮಂಗಳೂರು ಧಮಾಧ್ಯಕ್ಷರಾದ ಡಾ.ಪೀಟರ್ ಪಾವ್ಲ್ ಸಲ್ದಾನ ಚಾಲನೆ ನೀಡಿದರು. ಶಾಸಕ ಹರೀಶ್ ಪೂಂಜ ಹಾಗೂ ಇತರ ದಾನಿಗಳನ್ನು ಅಭಿನಂದಿಸಲಾಯಿತು.

ಸಮಾವೇಶ ನಿರ್ಣಯಗಳು

ರಾಜ್ಯ ಸರಕಾರ ಕೂಡಲೇ ಕ್ರೈಸ್ತ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ಅದಕ್ಕೆ 500 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಸಮುದಾಯದ ಜನರ ಅಭಿವೃದ್ಧಿಗೆ ನೆರವಾಗಬೇಕು, ಸೆ.8 ಕರಾವಳಿಯ ಕ್ರೈಸ್ತರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದ್ದು ಅದನ್ನು ಕರಾವಳಿ ಜಿಲ್ಲೆಗಳಲ್ಲಿ ಸರಕಾರ ರಜೆಯನ್ನು ಘೋಷಿಸಬೇಕು, ಮಂಗಳೂರಿನಲ್ಲಿ ಕ್ರೈಸ್ತ ಭವನ ಹಾಗೂ ಯುವಕರಿಗೆ ಮಾರ್ಗದರ್ಶನ ನೀಡಲು ಆಪ್ತ ಸಮಾಲೋಚನಾ ಕೇಂದ್ರವನ್ನು ಆರಂಭಿಸಬೇಕು ಅದಕ್ಕೆ ಅನುದಾನ ಹಾಗೂ ಜಮೀನು ಒದಗಿಸಬೇಕು. ಕ್ರೈಸ್ತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪಕ್ಷಗಳು ಸೂಕ್ತವಾದ ಪ್ರಾತಿನಿತ್ಯವನ್ನು ನೀಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಸಮಾವೇಶದಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಈ ಬಗ್ಗೆ ಸರಕಾರಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು.

ಕಲ್ಲಡ್ಕ ಪ್ರಭಾಕರ ಭಟ್ಟರು ಕ್ರೈಸ್ತ ಸಮುದಾಯದ ಬಗ್ಗೆ, ಧಾರ್ಮಿಕ ಮುಖಂಡರುಗಳ ಬಗ್ಗೆ ಮಾತನಾಡಿರುವ ರೀತಿ ಸರಿಯಾದುದಲ್ಲ. ಭಟ್ಟರೇ ನೀವು ಜನಗಳ ಮನಸ್ಸನ್ನು ಒಡೆಯುವ ಕಾರ್ಯವನ್ನು ಮಾಡಬೇಡಿ, ಇತರರ ಮನಸ್ಸನ್ನು ನೋಯಿಸುವ ಕಾರ್ಯವನ್ನು ಮಾಡಬೇಡಿ, ಪ್ರೀತಿಸುವ ಕಾರ್ಯವನ್ನು ಮಾಡಿ.

- ರೊನಾಲ್ಡ್ ಸಲ್ದಾನ ಅನಿವಾಸಿ ಉದ್ಯಮಿ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News