ಸರಕಾರಿ ಜಾಗದಲ್ಲಿ ನಿವೇಶನ ನಿರ್ಮಿಸುವ ಕ್ರಮ ವಿರೋಧಿಸಿ ಧರಣಿ

Update: 2020-02-02 14:45 GMT

ಉಡುಪಿ, ಫೆ.2: ಸಾರ್ವಜನಿಕ ಹಿತಾಸಕ್ತಿಗೆ ಮೀಸಲಿಟ್ಟ ಇಂದ್ರಾಳಿಯ ಇಂದ್ರಾಣಿ ದೇಗುಲದ ಅಶ್ವತ್ಥಕಟ್ಟೆಯ ಸಮೀಪದ ಸರಕಾರಿ ಜಾಗದಲ್ಲಿ ನಿವೇಶನ ನಿರ್ಮಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಆರೋಪಿಸಿ ಸ್ಥಳೀಯರು ರವಿವಾರ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ರಾಘವೇಂದ್ರ, ಇಂದ್ರಾಣಿ ದೇವಸ್ಥಾನದ ಬಳಿಯ ಸರಕಾರಿ ನಿವೇಶನವನ್ನು 1983-84ರಲ್ಲಿ ಸರಕಾರಿ ನೌಕರರಿಗೆ ಮಂಜೂರಾಗಿತ್ತು. ರೈತರ ಕೃಷಿಭೂಮಿಗೆ ನೀರು ಹೋಗಲು ಸಮಸ್ಯೆಯಾಗುವ ಹಿನ್ನೆಲೆಯಲ್ಲಿ 1987ರಲ್ಲಿ ನೌಕರರಿಗೆ ನೀಡಲಾದ ನಿವೇಶವನ್ನು ರದ್ದು ಪಡಿಸಲಾಗಿತ್ತು. ಆದರೆ ಆ ಸಂದರ್ಭ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುವ ಕೆಲ ನೌಕರರು ಅಧಿಕಾರವನ್ನು ಬಳಿಸಿಕೊಂಡು ತಮ್ಮ ನಿವೇಶವನ್ನು ರದ್ದು ಪಡಿಸದೆ ಹಾಗೇ ಉಳಿಸಿಕೊಂಡಿದ್ದಾರೆ. ಈ ಕುರಿತು ಈಗಾಗಲೇ ಅಪರ ಜಿಲ್ಲಾಧಿಕಾರಿಗಳಿಗೆ ತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಇದೀಗ ಸುಮಾರು 36 ವರ್ಷಗಳ ಬಳಿಕ ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. 10 ವರ್ಷಗಳಿಂದ ಸ್ಥಳೀಯರು ಈ ಜಾಗವನ್ನು ಸಾರ್ವಜನಿಕ ಹಿತಾಸಕ್ತಿಗಳಿಗೆ ಅಂದರೆ ಪಾರ್ಕ್, ಅಂಗನವಾಡಿ, ಲೈಬ್ರರಿ, ವೇದಿಕೆ ನಿರ್ಮಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರು, ಸಚಿವರಿಗೆ ಮನವಿ ಸಲ್ಲಿಸಿದ್ದರು. ಹಿಂದೆ ಇದೇ ಜಾಗದಲ್ಲಿ ಅಂಗನವಾಡಿ ನಿರ್ಮಿಸಲು ಅನುಮತಿ ದೊರಕ್ಕಿದರೂ ವಿವಿಧ ಕಾರಣದಿಂದ ಅದು ಈವೆಗೆ ಸಾಧ್ಯವಾಗಿಲ್ಲ ಎಂದು ದೂರಿದರು.

ಧರಣಿಯಲ್ಲಿ ಹಿರಿಯ ಪತ್ರಕರ್ತ ರಾಘವ ನಂಬಿಯಾರ್, ಸ್ಥಳೀಯರಾದ ಸತೀಶ್ ಮಲ್ಯ, ಅನಿಲ್, ನಾಗೇಶ್, ಸುಧೀರ್, ವಿಜಯ, ದಿನೇಶ್, ಕೀರ್ತಿ, ಪುನೀತ್ ಸೇರಿದಂತೆ ಇಂದ್ರಾಣಿ, ದುರ್ಗಾ ನರದ ನಿವಾಸಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News