ಬೆಂಗಳೂರು: ಶಾಸಕರಾಗಿ ರಿಝ್ವಾನ್ ಅರ್ಶದ್ ಪ್ರಮಾಣ ವಚನ

Update: 2020-02-03 11:51 GMT

ಬೆಂಗಳೂರು, ಫೆ. 3: ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ರಿಝ್ವಾನ್ ಅರ್ಶದ್ ಅವರು, ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಸೋಮವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ ವಿಧಾನಸಭಾ ಸ್ಪೀಕರ್ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ನೂತನ ಶಾಸಕ ರಿಝ್ವಾನ್ ಅರ್ಶದ್ ಅವರಿಗೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಮಾಣ ವಚನ ಬೋಧನೆ ಮಾಡಿದರು.

ರಿಝ್ವಾನ್ ಅರ್ಶದ್ ಅವರು ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ, ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅನಂತರ ನೂತನ ಶಾಸಕ ರಿಝ್ವಾನ್ ಅರ್ಶದ್ ಅವರಿಗೆ ಸ್ಪೀಕರ್ ಕಾಗೇರಿ, ವಿಧಾನಸಭೆ ನಡಾವಳಿ ಮತ್ತು ಸಂವಿಧಾನದ ಪುಸ್ತಕ ಹಾಗೂ ಪುಷ್ಪಗುಚ್ಚವನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣಬೈರೇಗೌಡ, ಶಾಸಕ ಎನ್.ಎ.ಹಾರಿಸ್, ಮೇಲ್ಮನೆ ಸದಸ್ಯ ನಸೀರ್ ಅಹ್ಮದ್, ರಿಝ್ವಾನ್ ಅರ್ಶದ್ ಅವರ ಪತ್ನಿ, ಮಗ ಸೇರಿ ಕುಟುಂಬದ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.

ರೋಷನ್‌ ಬೇಗ್ ರಾಜೀನಾಮೆಯಿಂದ ತೆರವಾಗಿದ್ದ ಶಿವಾಜಿನಗರ ಕ್ಷೇತ್ರಕ್ಕೆ ಡಿ.5ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಝ್ವಾನ್ ಅರ್ಶದ್, ಬಿಜೆಪಿ ಅಭ್ಯರ್ಥಿ ಎಂ.ಸರವಣ ಅವರನ್ನು 13,521 ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News