×
Ad

'ದಯವಿಟ್ಟು ನನ್ನನ್ನು ರಕ್ಷಿಸಿ': ಚೀನಾದಲ್ಲಿ ಸಿಕ್ಕಿಹಾಕಿಕೊಂಡ ಆಂಧ್ರ ಮಹಿಳೆಯಿಂದ ನೆರವಿಗೆ ಮೊರೆ

Update: 2020-02-03 15:16 IST

ಹೊಸದಿಲ್ಲಿ: ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿರುವ ಚೀನಾದ ವೂಹಾನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಆಂಧ್ರ ಮೂಲದ ಮಹಿಳೆಯೊಬ್ಬರು ವಿಡಿಯೊ ಸಂದೇಶವೊಂದರ ಮೂಲಕ ನೆರವಿಗೆ ಸರ್ಕಾರದ ಮೊರೆ ಹೋಗಿದ್ದಾರೆ. ಈ ಮಹಿಳೆ ಸೇರಿದಂತೆ ಆರು ಮಂದಿಯನ್ನು ಭಾರತಕ್ಕೆ ವಾಪಸ್ಸಾಗದಂತೆ ತಡೆಯಲಾಗಿತ್ತು.

ಭಾರತಕ್ಕೆ 324 ಮಂದಿಯನ್ನು ಕರೆತರಲು ವೂಹಾನ್‍ ನಿಂದ ಶನಿವಾರ ಹೊರಟ ಏರ್ ಇಂಡಿಯಾದ ವಿಶೇಷ ವಿಮಾನ ಏರದಂತೆ ಆರು ಭಾರತೀಯರನ್ನು ಚೀನಾ ಅಧಿಕಾರಿಗಳು ತಡೆದಿದ್ದರು.

ಶೆಂಝಾನ್ ಮೂಲದ ಚೀನಾ ಇಲೆಕ್ಟ್ರಾನಿಕ್ಸ್ ಕಂಪನಿಯ ಇಬ್ಬರು ಟ್ರೈನಿಗಳು ಮತ್ತು ನಾಲ್ವರು ವಿದ್ಯಾರ್ಥಿಗಳು ಇವರಲ್ಲಿ ಸೇರಿದ್ದಾರೆ. ಇವರು ಹೊಸದಿಲ್ಲಿಗೆ ತೆರಳುವ ವಿಮಾನ ಏರುವ ಮೊದಲು ನಡೆದ ತಪಾಸಣೆ ವೇಳೆ ಆರು ಮಂದಿಯನ್ನು ತಡೆಯಲಾಗಿತ್ತು.

ಆರೋಗ್ಯ ತಪಾಸಣೆ ವೇಳೆ ಇವರ ದೇಹದ ಉಷ್ಣಾಂಶ ಸಾಮಾನ್ಯಕ್ಕಿಂತ ಅಧಿಕವಾಗಿತ್ತು ಅಥವಾ ವ್ಯತ್ಯಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಮಿಗ್ರೇಶನ್ ಸರದಿಯಿಂದ ಅವರನ್ನು ಸರಿಸಲಾಗಿತ್ತು. ಜ್ವರ, ಕಫ ಮತ್ತು ಉಸಿರಾಟ ತೊಂದರೆ ಕೊರೋನಾವೈರಸ್‍ ನ ಮುಖ್ಯ ಲಕ್ಷಣಗಳಾಗಿವೆ.

ಮಾಸ್ಕ್‍ನಿಂದ ಮುಖವನ್ನು ಮುಚ್ಚಿಕೊಂಡ ಮಹಿಳೆ ವಿಡಿಯೊದಲ್ಲಿ ತಮಗೆ ಯಾರಿಗೂ ಕೊರೋನಾವೈರಸ್ ಲಕ್ಷಣಗಳಿಲ್ಲ ಎಂದು ಹೇಳಿಕೊಂಡಿದ್ದಾರೆ. ಇವರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವರು. ಮುಂದಿನ ವಿಮಾನದಲ್ಲಿ ಭಾರತಕ್ಕ ಕಳುಹಿಸುವುದಾಗಿ ಹೇಳಿದ್ದರು. ಆದರೆ ನಮ್ಮನ್ನು ನಿನ್ನೆ ಕೂಡಾ ವಿಮಾನಕ್ಕೆ ಹತ್ತಲು ಅವಕಾಶ ನೀಡಲಿಲ್ಲ. ನಾವು ಸಿಕ್ಕಿಹಾಕಿಕೊಂಡಿದ್ದೇವೆ ಎಂದು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News