ಅತ್ಯಾಚಾರ ಪ್ರಕರಣ: ಮಾಜಿ ಕೇಂದ್ರ ಸಚಿವ ಚಿನ್ಮಯಾನಂದನಿಗೆ ಜಾಮೀನು

Update: 2020-02-03 16:01 GMT

  ಅಲಹಾಬಾದ್,ಜ.3: ಕಾನೂನು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದಗೆ ಅಲಹಾಬಾದ್ ಹೈಕೋರ್ಟ್, ಸೋಮವಾರ ಜಾಮೀನು ನೀಡಿದೆ.

 ಅತ್ಯಾಚಾರಕ್ಕೊಳಗಾಗಿದ್ದಳೆನ್ನಲಾದ ಯುವತಿಯು, ಉತ್ತರಪ್ರದೇಶದ ಶಹಜಾನ್ ಪುರದಲ್ಲಿರುವ ಚಿನ್ಮಯಾನಂದ ನಿಯಂತ್ರಣದ ಎಸ್.ಎಸ್. ಕಾನೂನು ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದರು. ಬಿಜೆಪಿಯ ಮಾಜಿ ನಾಯಕರಾದ ಸ್ವಾಮಿ ಚಿನ್ಮಯಾನಂದ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆಕೆ ಆಪಾದಿಸಿದ್ದಾರೆ.

ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡ (ಸಿಟ್) ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. ಲೈಂಗಿಕ ದುರ್ವರ್ತನೆಯ ಪ್ರಕರಣ ದಾಖಲಾದ ಸುಮಾರು ಒಂದು ತಿಂಗಳ ಬಳಿಕ, ಸೆ.20, 2019ರಂದು ಚಿನ್ಮಯಾನಂದ ನನ್ನು ಬಂಧಿಸಲಾಗಿತ್ತು.

   ಚಿನ್ಮಯಾನಂದ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376ಸಿ (ವ್ಯಕ್ತಿ ಅಥವಾ ವ್ಯಕ್ತಿಗಳು, ತಮ್ಮ ಅಧಿಕೃ ಸ್ಥಾನಮಾನವನ್ನು ಬಳಸಿಕೊಂಡು ಲೈಂಗಿಕ ಸಂಪರ್ಕವನ್ನು ಹೊಂದುವುದು), 354 ಡಿ ( ಅಕ್ರಮವಾಗಿ ದಿಗ್ಬಂಧನದಲ್ಲಿಡುವುದು)ಹಾಗೂ 506 (ಕ್ರಿಮಿನಲ್ ಬೆದರಿಕೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

 ಆರೋಪಿ ಚಿನ್ಮಯಾನಂದನ ಬಂಧನವಾದ ಐದು ದಿನಗಳ ಬಳಿಕ ಬಿಜೆಪಿ ಹೇಳಿಕೆಯೊಂದನ್ನು ನೀಡಿ, ಆತ ಈಗ ಪಕ್ಷದಲ್ಲಿ ಇಲ್ಲವೆಂದು ತಿಳಿಸಿತ್ತು.

  ಆದಾಗ್ಯೂ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಸಿಟ್) ನವೆಂಬರ್ 6ರಂದು ಸ್ವಾಮಿ ಚಿನ್ಮಯಾನಂದ ಹಾಗೂ ಆತನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ವಿದ್ಯಾರ್ಥಿನಿಯ ವಿರುದ್ಧ ಪ್ರತ್ಯಪ್ರತ್ಯೇಕವಾಗಿ ಎರಡು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಅತ್ಯಾಚಾರ ಆರೋಪ ಹೊರಿಸಿದ ಯುವತಿಯು ಚಿನ್ಮಯಾನಂದನಿಂದ ಹಣವನ್ನು ಸುಲಿಗೆ ಮಾಡಲು ಯತ್ನಿಸಿದ್ದಳೆಂದು ಆರೋಪಿಸಲಾಗಿದೆ.

ಯುವತಿಗೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜಾಮೀನು ಬಿಡುಗಡೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News