×
Ad

ಕೇಂದ್ರ ಬಜೆಟ್ ನ ಪ್ರತಿಯೊಂದು ಅಂಕಿಯೂ ಅಪ್ಪಟ ಸುಳ್ಳು: ಅರ್ಥ ಶಾಸ್ತ್ರಜ್ಞೆ ಜಯತಿ ಘೋಷ್

Update: 2020-02-03 17:36 IST
  ಫೋಟೊ ಕೃಪೆ: twitter.com/Jayati1609

ಮುಂಬೈ, ಫೆ.3: ಕೇಂದ್ರ ಮುಂಗಡಪತ್ರದ ಕುರಿತು ಮಾತನಾಡಿರುವ ದಿಲ್ಲಿಯ ಜೆಎನ್‌ಯು ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ಜಯತಿ ಘೋಷ್ ಅವರು,ಅದರಲ್ಲಿಯ ಪ್ರತಿಯೊಂದು ಅಂಕಿಯೂ ಅಪ್ಪಟ ಸುಳ್ಳು ಎಂದು ಹೇಳಿದ್ದಾರೆ.

 ರವಿವಾರ ಇಲ್ಲಿ ಮುಂಬೈ ಕಲೆಕ್ಟಿವ್‌ನ ‘ಫ್ಲಾಟ್ ಟೈರ್ ಆರ್ ಇಂಜಿನ್ ಫೇಲ್ಯೂರ್?ದಿ ಇಂಡಿಯನ್ ಇಕಾನಮಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಘೋಷ್,ಭಾರತದ ಈಗಿನ ಆರ್ಥಿಕ ಹಿಂಜರಿತವು 1991 ಮತ್ತು 2008ರಲ್ಲಿದ್ದ ಸ್ಥಿತಿಗಿಂತ ತೀರ ಕೆಟ್ಟದ್ದಾಗಿದೆ. ಮುಂಗಡಪತ್ರದಲ್ಲಿ ಕೃಷಿ,ಉದ್ಯೋಗ ಖಾತರಿ,ಆಹಾರ,ಆರೋಗ್ಯ ಮತ್ತು ಶಿಕ್ಷಣದಂತಹ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಎಲ್ಲ ಕ್ಷೇತ್ರಗಳಿಗೆ ಹಂಚಿಕೆಗಳನ್ನು ಕಡಿತಗೊಳಿಸಿರುವುದು ಇನ್ನಷ್ಟು ಅಧ್ವಾನವನ್ನುಂಟು ಮಾಡಿದೆ ಎಂದು ಹೇಳಿದರು.

ಮುಂಗಡಪತ್ರದಲ್ಲಿಯ ಎಲ್ಲ ಅಂಕಿಸಂಖ್ಯೆಗಳು ಸುಳ್ಳಾಗಿವೆ. ಪ್ರತಿಯೊಂದು ಸ್ವೀಕೃತಿ,ಈ ವರ್ಷ ಅವರು (ಸರಕಾರ) ವ್ಯಯಿಸುತ್ತಿರುವ ಕುರಿತು ಪರಿಷ್ಕೃತ ಅಂದಾಜುಗಳು ಸುಳ್ಳುಗಳಾಗಿವೆ. ಅವರು ಒಂದು ತಿಂಗಳು ಮೊದಲೇ ಮುಂಗಡಪತ್ರವನ್ನು ಮಂಡಿಸಿದ್ದಾರೆ. ವಿತ್ತ ವರ್ಷವು ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತದೆ ಮತ್ತು ನಮ್ಮ ಬಳಿ ಕೇವಲ ಡಿ.31ರವರೆಗಿನ ದತ್ತಾಂಶಗಳಿವೆ. ಹೀಗಾಗಿ ಮುಂದಿನ ಮೂರು ತಿಂಗಳುಗಳಲ್ಲಿ ಏನು ಸಂಭವಿಸುತ್ತದೆ ಎನ್ನ್ನುವುದನ್ನು ಅವರು ಅಂದಾಜಿಸಬೇಕಾಗುತ್ತದೆ ಮತ್ತು ಸುಳ್ಳುಗಳು ಅಡಗಿರುವುದು ಇಲ್ಲಿಯೇ ಎಂದು ಹೇಳಿದರು.

 ಆರ್ಥಿಕತೆಯ ಉಚ್ಛ್ರಾಯವೆಂದು ಪರಿಗಣಿಸಲಾಗಿದ್ದ 2000ರ ಮಧ್ಯದಲ್ಲಿಯೇ ಆರ್ಥಿಕ ಅಸ್ತವ್ಯಸ್ತತೆ ಆರಂಭಗೊಂಡಿತ್ತು ಎಂದು ಹೇಳಿದ ಘೋಷ್,ಈ ಅವಧಿಯಲ್ಲಿಯೇ ಈ ಹಲವಾರು ಸಮಸ್ಯೆಗಳು ಹುಟ್ಟಿದ್ದವು. ಅದು ಅಸಮಾನತೆ ಆಧಾರದ ಬೆಳವಣಿಗೆಯಾಗಿತ್ತು ಮತ್ತು ಅದು ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅದು ವಿಭಜಿತ ಕಾರ್ಮಿಕ ಮಾರುಕಟ್ಟೆ,ಲಿಂಗ ಮತ್ತು ಜಾತಿ ಹಾಗೂ ಜನಾಂಗೀಯ ಸಾಮಾಜಿಕ ತಾರತಮ್ಯಗಳನ್ನು ಆಧರಿಸಿತ್ತು. ಅತ್ಯಂತ ಅಗ್ಗದ ಬೆಲೆಗಳಲ್ಲಿ ಕಾರ್ಮಿಕರ ಶ್ರಮದ ಲಾಭ ಪಡೆದುಕೊಳ್ಳಲು ಈ ಸಾಮಾಜಿಕ ತಾರತಮ್ಯಗಳನ್ನು ಉದ್ಯೋಗದಾತರು ದುರುಪಯೋಗಿಸಿಕೊಂಡಿದ್ದರು ಎಂದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬೈ ವಿವಿಯ ಅರ್ಥಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥೆ ಮತ್ತು ಈ ಹುದ್ದೆಯನ್ನು ವಹಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ರೀತು ದಿವಾನ್ ಅವರು, ಮುಂಗಡ ಪತ್ರವು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಎಲ್ಲ ಫೆಲೊಶಿಪ್‌ಗಳನ್ನು ರದ್ದುಗೊಳಿಸಿದೆ. ಇದು ನಿಜಕ್ಕೂ ಮುಂಗಡಪತ್ರವು ಜಾತಿ ದೃಷ್ಟಿಕೋನವನ್ನು ಆಧರಿಸಿದೆ ಎನ್ನ್ನುವುದನ್ನು ಸೂಚಿಸಿದೆ. ದತ್ತಾಂಶಗಳ ಕೊರತೆ ಇರುವುದರಿಂದ ಅರ್ಥಶಾಸ್ತ್ರಜ್ಞರ ಕಾರ್ಯ ಕಠಿಣವಾಗಲಿದೆ. ದತ್ತಾಂಶವು ಹೊಸ ನಗರ ನಕ್ಸಲ್, ಹೊಸ ದೇಶವಿರೋಧಿಯಾಗಿದೆ. ಅದನ್ನು ಜೈಲಿಗೆ ಹಾಕಬೇಕು, ಅದು ಬೇಡಿಕೊಂಡರೂ ಅದನ್ನು ಬಿಡುಗಡೆಗೊಳಿಸಬಾರದು. ಆದ್ದರಿಂದ ನಮ್ಮೆದುರಿಗಿರುವುದು ವಿಕಿಪಿಡಿಯಾದ ದತ್ತಾಂಶಗಳನ್ನು ಬಳಸಿರುವ ಆರ್ಥಿಕ ಸಮೀಕ್ಷೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News