ಶಾಹಿನ್ ಬಾಗ್, ಜಾಮಿಯಾದ ಪ್ರತಿಭಟನೆಗಳು ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯೋಗ: ಪ್ರಧಾನಿ ಮೋದಿ
ಹೊಸದಿಲ್ಲಿ: ಪೌರತ್ವ ಕಾಯ್ದೆಯ ವಿರುದ್ಧ ದಿಲ್ಲಿಯ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಕಾಕತಾಳಿಯವಲ್ಲ, ಬದಲಾಗಿ ದೇಶದ ರಾಜಧಾನಿಯ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ವಿಪಕ್ಷಗಳು ನಡೆಸುತ್ತಿರುವ ಪ್ರಯೋಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
"ಅವರು ಯಾವತ್ತಿಗೂ ವೋಟ್ ಬ್ಯಾಂಕಿಂಗ್, ಓಲೈಕೆಯ ರಾಜಕೀಯ ನಡೆಸುತ್ತಾರೆ. ಅವರು ಸುರಕ್ಷಿತ ವಾತಾವರಣವನ್ನು ದಿಲ್ಲಿಯಲ್ಲಿ ನಿರ್ಮಿಸಲು ಸಾಧ್ಯವೇ? ಇಲ್ಲ. ಸಿಎಎ ವಿರುದ್ಧ ಸೀಲಾಂಪುರ್, ಜಾಮಿಯಾ ಅಥವಾ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನೀವು ನೋಡಿರಬಹುದು. ಇದು ಕಾಕತಾಳೀಯ ಎಂದು ನಿಮಗನಿಸುತ್ತಿದೆಯೇ? ಇಲ್ಲ, ಇದೊಂದು ಪ್ರಯೋಗ" ಎಂದವರು ಹೇಳಿದರು.
ರಸ್ತೆಯನ್ನು ಪ್ರತಿಭಟನಕಾರರು ತಡೆದ ಕಾರಣದಿಂದ ನೋಯ್ಡಾಕ್ಕೆ ಹೋಗುವ ಹಾಗೂ ಅಲ್ಲಿಂದ ಬರುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ದಿಲ್ಲಿಯ ಜನರು ಮೌನವಾಗಿದ್ದಾರೆ. ಅವರು ಮತ ಬ್ಯಾಂಕ್ ರಾಜಕೀಯವನ್ನು ಆಕ್ರೋಶದಿಂದ ವೀಕ್ಷಿಸುತ್ತಿದ್ದಾರೆ. ಶಾಹಿನ್‌ಬಾಗ್ ಪ್ರತಿಭಟನೆಯಿಂದಾಗಿ ದಿಲ್ಲಿಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ‘‘ಪಿತೂರಿ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಇನ್ನೊಂದು ರಸ್ತೆ ಅಥವಾ ಬೀದಿಯಲ್ಲಿ ತಡೆ ಉಂಟಾಗಲಿದೆ. ಆದರೆ, ದಿಲ್ಲಿಯಲ್ಲಿ ಇಂತಹ ಅರಾಜಕತೆ ಸೃಷ್ಟಿಯಾಗಲು ನಾವು ಅವಕಾಶ ನೀಡಲಾರೆವು’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.