ಪಾಕ್ ನಿರ್ಧಾರವನ್ನು ಸ್ವಾಗತಿಸಿದ ಚೀನಾ

Update: 2020-02-03 15:10 GMT

ಬೀಜಿಂಗ್, ಫೆ. 3: ಕೊರೋನವೈರಸ್ ಸೋಂಕು ಪೀಡಿತ ಹುಬೈ ಪ್ರಾಂತ ಮತ್ತು ವುಹಾನ್ ನಗರದಿಂದ ತನ್ನ ಪ್ರಜೆಗಳನ್ನು ತೆರವುಗೊಳಿಸದಿರಲು ‘ಉಕ್ಕಿನ ಸಹೋದರ’ ಪಾಕಿಸ್ತಾನ ತೆಗೆದುಕೊಂಡ ನಿರ್ಧಾರವನ್ನು ಚೀನಾ ಸೋಮವಾರ ಸ್ವಾಗತಿಸಿದೆ. ಇದು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಚೀನಾದ ಸಾಮರ್ಥ್ಯದ ಮೇಲೆ ಪಾಕಿಸ್ತಾನ ಇರಿಸಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಅದು ಹೇಳಿದೆ.

ಚೀನಾದಲ್ಲಿ ಮಾರಕ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 361ಕ್ಕೇರಿದೆ ಹಾಗೂ 17,000ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮುಂದಿನ ವಾರಗಳಲ್ಲಿ ಈ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಪಾಕಿಸ್ತಾನದ ಹಲವು ನೂರು ವಿದ್ಯಾರ್ಥಿಗಳು ಬೀಗಮುದ್ರೆಗೊಳಗಾಗಿರುವ ವುಹಾನ್ ನಗರದಲ್ಲಿ ಇದ್ದಾರೆ. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಕಲಿಯುತ್ತಿದ್ದಾರೆ ಹಾಗೂ ಹೆಚ್ಚಿನವರು ಚೀನಾ ಸರಕಾರದ ಸ್ಕಾಲರ್‌ಶಿಪ್ ಪಡೆದುಕೊಂಡಿದ್ದಾರೆ.

ಭಾರತೀಯ ವಿದ್ಯಾರ್ಥಿಗಳೊಂದಿಗೆ ಹೋಲಿಸಿಕೊಂಡ ಪಾಕ್ ವಿದ್ಯಾರ್ಥಿಗಳು

ವುಹಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಪಾಕಿಸ್ತಾನಿ ವಿದ್ಯಾರ್ಥಿಗಳ ಪೈಕಿ ಕೆಲವರು ತಮ್ಮ ಸಂಕಷ್ಟಗಳನ್ನು ತೋರಿಸುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ. ತಮ್ಮದೇ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ತಮ್ಮ ಪರಿಸ್ಥಿತಿಯೊಂದಿಗೆ ಹೋಲಿಸಿಕೊಂಡಿದ್ದಾರೆ. ಕಳೆದ ವಾರ ಭಾರತೀಯ ವಿದ್ಯಾರ್ಥಿಗಳನ್ನು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಕರೆ ತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News